ಏಳು ದಶಕಗಳೇ ಗತಿಸಿ ಹೋಗಿವೆ. ಅದೆಷ್ಟೋ ರಾಜಕೀಯ ಪಲ್ಲಟಗಳು ಘಟಿಸಿವೆ. ರಕ್ತ ಸಿಕ್ತ ಸಮರಗಳೇ ಮುಗಿದು ಹೋಗಿವೆ. ಜಾಗತಿಕ ಮಟ್ಟದಲ್ಲಿ ಆ ದೇಶದ ಮಾನ, ಮರ್ಯಾದೆ ಮೂರು ಕಾಸಿಗೆ ಹರಾಜಾಗಿದೆ. ಆದರೂ ಪಾಪಿ ಪಾಕಿಸ್ಥಾನದ ಜಾಯಮಾನ ಮಾತ್ರ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ. ಅದು ಪಾಕ್ ನಿರ್ಮಾತೃ ಮಹ್ಮದಲಿ ಜಿನ್ನಾನಿಂದ ಹಿಡಿದು, ಭುಟ್ಟೋ, ಮುಷರಫ್ ಆದಿಯಾಗಿ ಇಂದಿನ ಪಾಕ್ ಸೇನಾ ಮುಖ್ಯಸ್ಥ ಅಸೀಂ ಮುನೀರ್ ವರೆಗೂ ಎಲ್ಲರದ್ದೂ ಅದೇ ಕಾಲ್ಕೆರೆದು ಜಗಳಕ್ಕೆ ನಿಲ್ಲುವ ದುರಂಹಂಕಾರ.
ಕಾಶ್ಮೀರ ಪಾಕಿಸ್ಥಾನದ ಕಂಠನಾಳವಿದ್ದಂತೆ
ಭಾರತದ ಮುಕುಟಮಣಿ.. ಶ್ವೇತ ಸುಂದರಿ ಕಾಶ್ಮೀರದ ಮೇಲೆ ಅಂದಿನಿಂದ ಇಂದಿನವರೆಗೂ ಪಾಕಿಸ್ಥಾನದ ಕರಾಳ ದೃಷ್ಠಿ ಇದ್ದೇ ಇದೆ. ಉಗ್ರವಾದವೆನ್ನೋ ವಿಷಜಂತುವಿಗೆ ಹಾಲೆರೆದು ಸಲುಹಿ ಭಾರತದ ವಿರುದ್ಧ ಎತ್ತಿಕಟ್ಟುತ್ತಾ ಬಂದಿರುವ ಪಾಕ್ ಈಗ ಹಲ್ಲಿಲ್ಲದ ಹಾವು ಅನ್ನೋದು ಸ್ಪಷ್ಟ. ಮೋದಿ ಸರ್ಕಾರ ಬಂದ ನಂತರ ತುಟಿ ಪಿಟಿಕ್ ಎನ್ನದ ಪಾಕ್ ಈಗ ಮತ್ತೆ ಬುಸುಗುಡಲು ಶುರುಮಾಡಿದೆ. ಅಂದು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಸಮರ ಸಾರಿದ್ದ ಮೋದಿ, ಉಗ್ರರ ಸಂಹಾರದ ಸಂಕಲ್ಪ ಮಾಡಿದರು. ಆದರೀಗ ಪಾಕ್ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಮತ್ತದೇ ಹಳೇ ದಾಟಿಯಲ್ಲೇ ಕಾಶ್ಮೀರ ನಮ್ಮದು ಅನ್ನೋ ಕ್ಯಾತೆ ತೆಗೆದಿದ್ದಾರೆ.
13 ಲಕ್ಷ ಭಾರತೀಯ ಸೇನೆಗೆ ಹೆದರೋದಿಲ್ಲ
ಕಾಶ್ಮೀರ ಈ ಹಿಂದೆಯೇ ಪಾಕಿಸ್ಥಾನಕ್ಕೆ ಸೇರಬೇಕಿತ್ತು. ಆದರೆ ಅದು ಇಂದಲ್ಲಾ ನಾಳೆ ಆಗೇ ಆಗುತ್ತೆ. ಇದು ನಮ್ಮ ಕಂಠನಾಳವಿದ್ದಂತೆ. ಕಾಶ್ಮೀರ ಪಡೆಯಲು ಹೋರಾಡ್ತಿರುವ ಪ್ರತಿ ಹೋರಾಟಗಾರನ ಪರವಾಗಿ ಪಾಕಿಸ್ಥಾನವಿದೆ ಎಂದು ಅಸೀಂ ಮುನೀರ್ ಘೋಷಿಸಿದ್ದಾರೆ. ಅನಿವಾಸಿ ಪಾಕಿಸ್ಥಾನಗಳನ್ನುದ್ದೇಶಿಸಿ ಮಾತನಾಡುತ್ತಾ ಕಾಶ್ಮೀರದ ಮೇಲೆ ಕಣ್ಣಾಕಿರುವ ಪಾಕ್, 13 ಲಕ್ಷ ಭಾರತೀಯ ಸೈನಿಕರಿಗೆ ಹೆದರುವ ಪ್ರಶ್ನೆಯೇ ಇಲ್ಲಾ ಅಂತಾ ಧಿಮಾಕಿನ ಮಾತುಗಳನ್ನಾಡಿದ್ದಾರೆ. ಸಾಲದ್ದಕ್ಕೆ ಬಲೂಚಿಸ್ಥಾನವೂ ಪಾಕಿಸ್ಥಾನದ ಸ್ವಂತ ಎನ್ನುವ ಮೂಲಕ ಭಾರತದ ತಾಳ್ಮೆ ಕೆಣಕುವ ಸಾಹಸಕ್ಕೆ ಪಾಕ್ ಕೈ ಹಾಕಿದೆ.
ಪಾಕಿಸ್ಥಾನದ ವಿರುದ್ಧ ಛಡಿಯೇಟು ಬೀಸಿದ ಭಾರತ
ದೇಹದ ಅವಿಭಾಜ್ಯ ಅಂಗವೊಂದು ಬೇರೊಬ್ಬರ ಕಂಠನಾಳ ಆಗಲು ಹೇಗೆ ಸಾಧ್ಯ? ಪಾಕ್ ಸೇನಾಧಿಕಾರಿ ಹೇಳಿಕೆ ವಿರುದ್ಧ ಖಡಕ್ ಉತ್ತರವನ್ನೇ ನೀಡಿರುವ ಭಾರತೀಯ ವಿದೇಶಾಂಗ ಇಲಾಖೆ, ಕಾಶ್ಮೀರ ಅಂದು ಇಂದು ಎಂದೆಂದಿಗೂ ನಮ್ಮದೇ ಅಂತಾ ಶರಾ ಬರೆದಿದ್ದಾರೆ. ಅಷ್ಟೇ ಅಲ್ಲಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿ ಕೂತಿರೋ ಪಾಕಿಗಳೇ ಅಲ್ಲಿಂದ ತೊಲಗಿ ಅಂತಲೂ ವಿದೇಶಾಂಗ ಇಲಾಖೆ ವಕ್ತಾರ ಜೈಸ್ವಾಲ್ ಗುಡುಗಿದ್ದಾರೆ. ಒಟ್ಟಿನಲ್ಲಿ ಪಾಕಿಸ್ಥಾನ ಮತ್ತೆ ಉಗ್ರವಾದಕ್ಕೆ ಅನ್ನ ನೀರು ನೀಡಿ ಕಾಶ್ಮೀರ ಕಬಳಿಸುವ ಷಡ್ಯಂತ್ರ ರೂಪಿಸುತ್ತಿದೆ. ಆದರೆ, ಭಾರತವೀಗ ಬದಲಾಗಿದೆ. ಶಕ್ತ ಭಾರತವನ್ನು ಎದುರು ಹಾಕಿಕೊಂಡರೆ ಉಳಿಗಾಲವಿಲ್ಲ ಅನ್ನೋದು ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಮನವರಿಕೆಯಾಗಿದೆ. ಆದರೂ ದುಸ್ಸಾಹಸ ಬುದ್ಧಿಯ ಪಾಕಿಗಳು ಸುಮ್ಮನಿರದೆ ಕರೆದು ಹೊಡಿಸಿಕೊಂಡ್ರು ಅನ್ನೋ ಮಾತನ್ನು ಸತ್ಯ ಮಾಡುವಂತಿದೆ.