ಬೆಳಗಾವಿ: ಟೀ ಅಂಗಡಿಯ ಯುವಕನ ಮೇಲೆ ಗ್ರಾಪಂ ಉಪಾಧ್ಯಕ್ಷ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಹಿಗ್ಗಾಮುಗ್ಗಾ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಈ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.
ಗ್ರಾಪಂ ಉಪಾಧ್ಯಕ್ಷ ಕಲ್ಮೇಶ್ ಗಾಣಿಗೇರ್ ಎಂಬಾತನಿಂದ ಹಲ್ಲೆ ನಡೆದಿದೆ. ಕುಡಿದ ನಶೆಯಲ್ಲಿ ಟೀ ಅಂಗಡಿಯ ಯುವಕನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಸಿಗರೇಟ್ ವಿಚಾರಕ್ಕೆ ಆರಂಭವಾಗಿದ್ದ ಜಗಳ ವಿಕೋಪಕ್ಕೆ ತೆರಳಿ, ಈ ಘಟನೆ ನಡೆಯುವಂತಾಗಿದೆ. ಸಿಗರೇಟ್ ವಿಚಾರಕ್ಕೆ ನಿಂದನೆ ಮಾಡಿದ್ದ ಅಂಗಡಿಯ ಹುಡುಗ ಪ್ರಜ್ವಲ್ ಮೇಲೆ ಮಾರಣಾಂತಿಕವಾಗಿ ಕಲ್ಮೇಶ ಹಾಗೂ ಸ್ನೇಹಿತ ಈರಣ್ಣ ಮುದ್ದಾಪುರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಯಾದವಾಡ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಅಂಗಡಿಯ ಪ್ರಜ್ವಲ್ ದೊಡ್ಡಮನಿ ಎಂಬ ಯುವಕನ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಪ್ರಜ್ವಲ್ ದೊಡ್ಡಮನಿ ಮೂಡಲಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಕುರಿತು ಕುಲಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.



















