ತಿರುವನಂತಪುರಂ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೆಲ ದಿನಗಳಿಂದ ಕಣ್ತಪ್ಪಿಸಿ
ಕೊಂಡು ಓಡಾಡುತ್ತಿದ್ದ ಕೇರಳದ ಪಾದ್ರಿಯೊಬ್ಬರನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಜಾನ್ ಜೇಬರಾಜ್ (37) ಎಂಬ ಪಾದ್ರಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಪಾದ್ರಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಕೇರಳದ ಮುನ್ನಾರ್ ನಲ್ಲಿ ಇವರನ್ನು ಬಂಧಿಸಲಾಗಿದೆ. ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಕಿಂಗ್ಸ್ ಜನರೇಷನ್ ಚರ್ಚ್ ಪಾದ್ರಿಯಾಗಿರುವ ಜಾನ್ ಜೇಬರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅಷ್ಟೇ ಖ್ಯಾತಿಯನ್ನೂ ಗಳಿಸಿದ್ದಾರೆ.
ಪಾರ್ಟಿಯೊಂದರಲ್ಲಿ ಇವರು ಹಲವು ತಿಂಗಳ ಹಿಂದೆ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಇಬ್ಬರಲ್ಲಿ ಒಬ್ಬ ಬಾಲಕಿಯು ಸಂಬಂಧಿಯೊಬ್ಬರ ಬಳಿಕ ಈ ವಿಷಯ ತಿಳಿಸಿದ್ದಳು. ಸಂಬಂಧಿಕರು ಬಳಿಕ ಕೊಯಮತ್ತೂರಿನಲ್ಲಿರುವ ಸೆಂಟ್ರಲ್ ಆಲ್ ವುಮೆನ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾದ ಬಳಿಕವೇ ಜಾನ್ ಜೇಬರಾಜ್ ಕಣ್ಮರೆಯಾಗಿದ್ದರು. ಇವರು ವಿದೇಶಕ್ಕೂ ಪರಾರಿಯಾಗುವ ಸಾಧ್ಯತೆ ಇದ್ದ ಕಾರಣ ಲುಕ್ ಔಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು. ಈಗ ಕೊನೆಗೂ ಪೊಲೀಸರು ಇವರನ್ನು ಕೇರಳದಲ್ಲಿ ಬಂಧಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಿರೀಕ್ಷಣಾ ಜಾಮೀನಿಗಾಗಿ ಜಾನ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಕೆಲ ದಿನಗಳ ಹಿಂದಷ್ಟೇ ಪಂಜಾಬ್ ನ ಪಾದ್ರಿಯೊಬ್ಬರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. 2018ರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಜಿಂದರ್ ಸಿಂಗ್ ಎಂಬ ಪಾದ್ರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು.



















