ಲಖನೌ: ದೇಶದಲ್ಲಿ ವಕ್ಫ್ ಕಾಯ್ದೆ ಜಾರಿಗೆ ಬಂದ ಬೆನ್ನಲ್ಲೇ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿರುವ ದರ್ಗಾವೊಂದರ ವಿರುದ್ಧ ಹಣಕಾಸು ಅಕ್ರಮ ಸೇರಿ ಹಲವು ಆರೋಪಗಳು ಕೇಳಿಬಂದಿದ್ದು, ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ. ಚಂದೌಸಿ ಪ್ರದೇಶದ ಜನತೇ ಷರೀಫ್ ದರ್ಗಾ ವಿರುದ್ಧ ಭೂಮಿಯ ಅತಿಕ್ರಮಣ, ಹಣಕಾಸು ಅಕ್ರಮ, ವಕ್ಫ್ ಆಸ್ತಿಯನ್ನು ವೈಯಕ್ತಿಕ ಬಳಕೆಗಾಗಿ ಉಪಯೋಗ ಮಾಡುತ್ತಿರುವುದು ಸೇರಿ ಹ ಲವು ಆರೋಪಗಳು ಕೇಳಿಬಂದ ಕಾರಣ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.
ವಕ್ಫ್ ಆಸ್ತಿಯನ್ನು ಶಹೀದ್ ಮಿಯಾಂ ಎಂಬ ವ್ಯಕ್ತಿಯು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಇದೇ ಜಾಗದಲ್ಲಿ ನಕಲಿ ಆಸ್ಪತ್ರೆಯನ್ನು ಕೂಡ ಶಹೀದ್ ಮಿಯಾಂ ನಡೆಸುತ್ತಿದ್ದಾರೆ. ಕಳೆದ 7 ವರ್ಷಗಳಿಂದಲೂ ವಕ್ಫ್ ಆಸ್ತಿಯನ್ನು ಲೆಕ್ಕಹಾಕಲು ಯಾವುದೇ ಮುತವಲ್ಲಿಯನ್ನು (ಜಾಗದ ಉಸ್ತುವಾರಿಯನ್ನು ನೋಡಿಕೊಳ್ಳುವವರು) ನೇಮಿಸಿಲ್ಲ ಎಂದು ಜಾವೇದ್ ಎಂಬುವರು ದೂರು ನೀಡಿದ್ದಾರೆ. ಇದಾದ ಬಳಿಕ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ.
ಚಂದೌಸಿಯ ತಹಸೀಲ್ದಾರ್ ಧೀರೇಂದ್ರ ಪ್ರತಾಪ್ ಸಿಂಗ್ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. “ಮೊದಲಿಗೆ, ಭೂಮಿಯು ವಕ್ಫ್ ಅಡಿಯಲ್ಲಿ ನೋಂದಣಿಯಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಇದಾದ ಬಳಿಕ, ದರ್ಗಾದ ಕಳೆದ ಏಳು ವರ್ಷದ ಹಣಕಾಸು ವಹಿವಾಟುಗಳ ಕುರಿತು ತನಿಖೆ ನಡೆಸಲಾಗುತ್ತದೆ” ಎಂದು ತಿಳಿಸಿದ್ದಾರೆ.