ಲಕ್ನೋ: ರೋಚಕ ಪಂದ್ಯದಲ್ಲಿ ಗುಜರಾತ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆದ್ದು ಬೀಗಿದೆ. ಏಡನ್ ಮಾಕ್ರಮ್ ಹಾಗೂ ನಿಕೋಲಸ್ ಪೂರನ್ (Nicholas Pooran) ಸ್ಫೋಟಕ ಅರ್ಧಶತಕಗಳ ನೆರವಿನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 6 ವಿಕೆಟ್‌ಗಳ ಜಯ ಕಂಡಿದೆ.
ಈ ಗೆಲುವಿನೊಂದಿಗೆ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. 5 ಪಂದ್ಯಗಳಲ್ಲಿ 2 ಪಂದ್ಯ ಸೋತಿರುವ ಆರ್‌ಸಿಬಿ 5ನೇ ಸ್ಥಾನಕ್ಕೆ ಕುಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಎಲ್ಲರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತ್ತು. 181 ರನ್ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) 19.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿ ಗೆಲುವು ಸಾಧಿಸಿತು.
181 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಸ್ಫೋಟಕ ಇನ್ನಿಂಗ್ಸ್ ನ ನಿರೀಕ್ಷೆ ಮೂಡಿಸಿತ್ತು. ಮೊದಲ ವಿಕೆಟ್‌ಗೆ ರಿಷಭ್ ಪಂತ್, ಏಡನ್ ಮಾರ್ಕ್ರಮ್ ಜೋಡಿ 38 ಎಸೆತಗಳಲ್ಲಿ 65 ರನ್, 2ನೇ ವಿಕೆಟ್‌ಗೆ ಮಾರ್ಕ್ರಮ್ ಮತ್ತು ನಿಕೋಲಸ್ ಪೂರನ್ ಜೋಡಿ 29 ಎಸೆತಗಳಲ್ಲಿ ಸ್ಫೋಟಕ 58 ರನ್ ಹಾಗೂ 3ನೇ ವಿಕೆಟಿಗೆ ಆಯುಷ್ ಬದೋನಿ, ಪೂರನ್ ಜೋಡಿ 25 ಎಸೆತಗಳಲ್ಲಿ 32 ರನ್ ಸಣ್ಣ ಜೊತೆಯಾಟ ನೀಡಿತು.
ಲಕ್ನೋ ಪರ ನಿಕೋಲಸ್ ಪೂರನ್ 61 ರನ್, ಏಡನ್ ಮಾರ್ಕ್ರಮ್ 58 ರನ್, ರಿಷಬ್ ಪಂತ್ 21 ರನ್, ಡೇವಿಡ್ ಮಿಲ್ಲರ್ 7 ರನ್, ಆಯುಷ್ ಬದೋನಿ ಅಜೇಯ 28 ರನ್, ಅಬ್ದುಲ್ ಸಮದ್ ಅಜೇಯ 2 ರನ್ ಗಳಿಸಿದರು. ಗುಜರಾತ್ ಪರ ಪ್ರಸಿದ್ಧ್ ಕೃಷ್ಣ 2 ವಿಕೆಟ್, ರಶೀದ್ ಖಾನ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.
ಗುಜರಾತ್ ಪರ ಶುಭಮನ್ ಗಿಲ್ – ಸಾಯಿ ಸುದರ್ಶನ್ ಉತ್ತಮ ಆರಂಭ ಪಡೆದರು. ಆದರೂ ಕೊನೆಯಲ್ಲಿ ಬ್ಯಾಟ್ಸಮನ್ ಗಳು ಎಡವಿದ್ದು, 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 180 ರನ್ ಗಳಿಸಿತ್ತು. ಈ ಜೋಡಿ 73 ಎಸೆತಗಳಲ್ಲಿ ಬರೋಬ್ಬರಿ 120 ರನ್ ಗಳಿಸಿತ್ತು.
ಗುಜರಾತ್ ಟೈಟಾನ್ಸ್ ಪರ ನಾಯಕ ಶುಭಮನ್ ಗಿಲ್ 60 ರನ್, ಸಾಯಿ ಸುದರ್ಶನ್ 56 ರನ್, ಶಾರೂಖ್ ಖಾನ್ 11 ರನ್, ಜೋಸ್ ಬಟ್ಲರ್ 16 ರನ್, ರುದರ್ಫೋರ್ಡ್ 22 ರನ್, ರಶೀದ್ ಖಾನ್ ಅಜೇಯ 4 ರನ್ ಗಳಿಸಿದರು.
ಲಕ್ನೋ ಪರ ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯಿ ತಲಾ 2, ದಿಗ್ವೇಶ್ ರಾಥಿ, ಅವೇಶ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.