ನವದೆಹಲಿ: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಿರುವ ಮಧ್ಯೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಸತತ ಎರಡನೇ ಬಾರಿಯೂ ಇಳಿಸಿದೆ. 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ್ದರಿಂದ ಸಾಲ ಮತ್ತು ಇಎಂಐಗಳ ಬಡ್ಡಿ ದರವೂ ಇಳಿಕೆಯಾಗಲಿದೆ. 25 ಬೇಸಿಸ್ ಪಾಯಿಂಟ್ ಇಳಿಕೆಯಾದ ಪರಿಣಾಮ ಈಗ ರೆಪೋ ದರ ಶೇ.6ಕ್ಕೆ ಇಳಿಕೆ ಕಂಡಿದೆ.
ಐದು ವರ್ಷಗಳ ಬಳಿಕ ಈ ಫೆಬ್ರವರಿಯಲ್ಲಿ ರೆಪೋ ದರವನ್ನು ಆರ್‌ಬಿಐ ಇಳಿಕೆ ಮಾಡಿತ್ತು. 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿದ್ದರಿಂದ ರೇಪೋ ದರ ಶೇ. 6.25ಕ್ಕೆ ತಗ್ಗಿತ್ತು. ಆರ್‌ಬಿಐ ರೆಪೋ ದರ ಇಳಿಕೆ ಮಾಡುತ್ತಿದ್ದಂತೆ ಬ್ಯಾಂಕ್‍ಗಳಿಗೆ ಬಿಸಿ ತಟ್ಟಲಿದೆ. ಬ್ಯಾಂಕ್‍ಗಳು ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕಾಗುತ್ತದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣಕಾಸು ನೀತಿ ಸಮಿತಿ(MPC)ಯ ವರದಿ ಬಿಡುಗಡೆ ಮಾಡಿ ರೆಪೋ ಕಡಿತದ ನಿರ್ಧಾರ ಪ್ರಕಟಿಸಿದರು.
ಈ ದರ ಕಡಿತದೊಂದಿಗೆ ಗೃಹ ಸಾಲದ ಬಡ್ಡಿದರಗಳು ಮತ್ತೊಮ್ಮೆ ಶೇ.8ಕ್ಕಿಂತ ಕೆಳಗೆ ಇಳಿಯುವ ಸಾಧ್ಯತೆಯಿದೆ. ಆರ್ಥಿಕತೆ ಮುನ್ನೋಟದ ಕುರಿತು ಮಾತನಾಡಿದ ಮಲ್ಹೋತ್ರಾ, ಜಲಾಶಯಗಳು ಭರ್ತಿಯಾಗಿರುವ ಕಾರಣ ಬೆಳೆ ಉತ್ಪಾದನೆಯಿಂದಾಗಿ ಈ ವರ್ಷ ಕೃಷಿ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಉತ್ಪಾದನಾ ಚಟುವಟಿಕೆಯೂ ವೇಗ ಪಡೆಯುತ್ತಿದ್ದು ಉತ್ತಮ ವ್ಯಾಪಾರ ವಹಿವಾಟು ಸಾಧ್ಯವಾಗಲಿದೆ ಅಂತಾ ಅಭಿಪ್ರಾಯ ಪಟ್ಟಿದ್ದಾರೆ.



















