ಶಿಮ್ಲಾ: ಬಾಲಿವುಡ್ ನಟಿ, ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮನಾಲಿಯಲ್ಲಿರುವ ಕಂಗನಾ ರಣಾವತ್ ನಿವಾಸಕ್ಕೆ ಸರ್ಕಾರವು 1 ಲಕ್ಷ ರೂ. ಬಿಲ್ ಪಾವತಿಸುವಂತೆ ರಶೀದಿ ನೀಡಿದೆ. ಈ ಕುರಿತು ಸಂಸದೆಯೇ ಮಾಹಿತಿ ನೀಡುವ ಜತೆಗೆ ಸರ್ಕಾರವನ್ನು ಟೀಕಿಸಿದ್ದಾರೆ.
ಮಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಗನಾ ರಣಾವತ್ ಮಾತನಾಡಿದರು. “ಮನಾಲಿಯಲ್ಲಿರುವ ನನ್ನ ಮನೆಗೆ ಒಂದು ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಸೂಚಿಸಲಾಗಿದೆ. ಹಾಗೆ ನೋಡಿದರೆ, ನಾನು ಮನಾಲಿ ನಿವಾಸದಲ್ಲಿ ವಾಸವೇ ಇಲ್ಲ. ಹೀಗಿದ್ದರೂ ಒಂದು ಲಕ್ಷ ರೂಪಾಯಿ ಪಾವತಿಸುವಂತೆ ಬಿಲ್ ಕಳುಹಿಸಲಾಗಿದೆ. ಇದು ರಾಜ್ಯದಲ್ಲಿರುವ ಅವ್ಯವಸ್ಥೆಗೆ ಹಿಡಿದ ಕನ್ನಡಿ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನನಗೆ ವಿದ್ಯುತ್ ಬಿಲ್ ನೋಡಿ ಅಚ್ಚರಿ ಅನಿಸಿತು. ಹಾಗೆಯೇ, ರಾಜ್ಯದಲ್ಲಿ ಎಂತಹ ಪರಿಸ್ಥಿತಿ ಇದೆಯಲ್ಲ ಎಂದು ಬೇಸರವೂ ಆಯಿತು. ಆದರೆ, ಸಹೋದರ-ಸಹೋದರಿಯರೆ, ನಿಮಗೆ ಎಂತಹ ಸರ್ಕಾರ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ನೀವು ತುಂಬ ಕಷ್ಟಪಟ್ಟು ಕೆಲಸ ಮಾಡುತ್ತೀರಿ. ಹಾಗೆಯೇ, ಸರ್ಕಾರಗಳನ್ನೂ ಅಳೆದು ತೂಗಿ ಆಯ್ಕೆ ಮಾಡಿ” ಎಂದು ಸಂಸದೆ ಹೇಳಿದ್ದಾರೆ.
“ನಾವು ಈ ದೇಶವನ್ನು, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ. ಹಾಗೆ ಮಾಡಲು, ಇಂತಹ ಪ್ರಭಾವಿಗಳಿಂದ ರಾಜ್ಯವನ್ನು, ದೇಶವನ್ನು ದೂರ ಇಡಬೇಕು. ಇಂತಹ ಆಡಳಿತಗಾರರಿಂದ ದೇಶಕ್ಕೆ ಹಾಗೂ ರಾಜ್ಯಕ್ಕೆ ಹಾನಿಯಾಗುತ್ತದೆ” ಎಂದು ಕೂಡ ಕರೆ ನೀಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಂಗನಾ ರಣಾವತ್ ಅವರು ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿ, ಸಂಸತ್ ಪ್ರವೇಶಿಸಿದ್ದಾರೆ.