ಮಂಡ್ಯ: ಒಂದೇ ಕುಟುಂಬದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ನಡೆದಿದೆ.
ವಿಸಿ ನಾಲೆಯಲ್ಲಿ (VC Canal) ಈ ದುರ್ಘಟನೆ ಸಂಭವಿಸಿದೆ. ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನಾರ್ತ್ ಬ್ಯಾಂಕ್ ಹತ್ತಿರ ನಡೆದ ದುರ್ಘಟನೆಯಲ್ಲಿ ಸೋನು (17), ಸಿಮ್ರಾನ್ (16), ಸಿದ್ದೀಶ್ (9) ಸಾವನ್ನಪ್ಪಿದ್ದಾರೆ.
ಮೈಸೂರಿನ (Mysuru) ಗೌಸಿಯಾನಗರದ ಈ ಮೂವರು ಚಿಕ್ಕಾಯರಹಳ್ಳಿ ಮಾರಮ್ಮ ಜಾತ್ರೆಗೆ ಆಗಮಿಸಿದ್ದರು. ಈಜಲು ಹೋಗಿ ವಿಸಿ ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಸೋನು, ಸಿದ್ದೀಶ್‌ನ ಮೃತದೇಹ ಪತ್ತೆಯಾಗಿದ್ದು, ಉಳಿದ ಸಿಮ್ರಾನ್ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಸಾವಿರಾರು ಎಕರೆ ಪ್ರದೇಶಕ್ಕೆ ಕಾವೇರಿ (Cauvery) ನೀರು ಉಣಿಸುವ ಮಂಡ್ಯ ಜಿಲ್ಲೆ ವಿಸಿ ನಾಲೆ (VC Canal)ಯಲ್ಲಿ 2018 ರಿಂದ ಇಲ್ಲಿಯವರೆಗೆ ವಿಸಿ ನಾಲೆ ದುರಂತದಲ್ಲಿ 40ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಆದರೂ ಅಧಿಕಾರಿಗಳು ತಡೆಗೋಡೆ ನಿರ್ಮಾಣ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.