ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್, ಇಬ್ಬರು ಕಾನ್ಸ್ ಟೇಬಲ್ ಸೇರಿದಂತೆ 7 ಜನರ ಮೇಲೆ ಎಫ್ ಐಆರ್ ದಾಖಲಾಗಿದೆ. ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಎ.ವಿ. ಕುಮಾರ್ ಎ1, ಕಾನ್ಸ್‌ಟೇಬಲ್ ಉಮೇಶ್ ಹಾಗೂ ಮತ್ತೊಬ್ಬ ಕಾನ್ಸ್ ಟೇಬಲ್ ಅನಂತ್ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಮೂವರು ಸರ್ಕಾರಿ ನೌಕರರು ಹಾಗೂ ನಾಲ್ವರು ಖಾಸಗಿ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಚೆನ್ನೇಗೌಡ ನೀಡಿದ ದೂರಿನ ಮೇಲೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆ ಕಲಂ 7a ಅಡಿ ಎಫ್ ಐಆರ್ ದಾಖಲಾಗಿದೆ. ಭ್ರಷ್ಟ ಅಥವಾ ಕಾನೂನು ಬಾಹಿರ ವಿಧಾನಗಳಿಂದ ವೈಯಕ್ತಿಕ ಪ್ರಭಾವ ಬೀರುವುದು. ಅನಗತ್ಯ ಪ್ರಯೋಜನ ಪಡೆಯುವ ಅಪರಾಧವನ್ನು 7a ಅಡಿ ಉಲ್ಲೇಖ ಮಾಡಲಾಗಿದೆ.
ಕಳೆದ ವಾರ ಅನ್ನಪೂರ್ಣೇಶ್ವರಿ ಠಾಣೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದರು. ಹೋಟೆಲ್ ಮೇಲೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಹೊಟೇಲ್ ನಲ್ಲಿ ಇಬ್ಬರು ಕಾನ್ಸ್ ಟೇಬಲ್ ಡೀಲ್ ನಡೆಸಿದ್ದರು. ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದರು. ಅಲ್ಲದೇ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದ ಬಗ್ಗೆ ವಿಡಿಯೋ ಬಿಡುಗಡೆಯಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಎಂ ಮೆಡಲ್ ಗೆ ಇನ್ಸ್‌ಪೆಕ್ಟರ್ ಎ.ವಿ. ಕುಮಾರ್ ಆಯ್ಕೆಯಾಗಿದ್ದರು. ಆದರೆ, ಈ ದಾಳಿ ನಡೆಯುತ್ತಿದ್ದಂತೆ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಈಗ ಕುಮಾರ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.