ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದ 48 ವರ್ಷದ ಉದ್ಯಮಿ ರಾಜೇಶ್ ಕುಮಾರ್ ಎಂಬವರು ತಮ್ಮ ಪತ್ನಿಯೊಂದಿಗೆ ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಂತಸದಲ್ಲಿ ತೇಲುತ್ತಿದ್ದ ಕುಟುಂಬಕ್ಕೆ ಈ ಘಟನೆ ಆಘಾತ ಉಂಟುಮಾಡಿದೆ. ರಾಜೇಶ್ ಅವರು ಡಾನ್ಸ್ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗಿದೆ.
ರಾಜೇಶ್ ಕುಮಾರ್ ತಮ್ಮ ಕುಟುಂಬದೊಂದಿಗೆ ಬರೇಲಿಯ ಮನೆಯಲ್ಲಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು. ರಾತ್ರಿ ಸುಮಾರು 8 ಗಂಟೆ ಸುಮಾರಿಗೆ, ಅವರು ತಮ್ಮ ಪತ್ನಿ ರೇಖಾ ಅವರೊಂದಿಗೆ ಜನಪ್ರಿಯ ಹಿಂದಿ ಗೀತೆಗೆ ನೃತ್ಯ ಮಾಡುತ್ತಿದ್ದರು. ಸುತ್ತಲೂ ನೆರೆದಿದ್ದ ಸಂಬಂಧಿಕರು, ಸ್ನೇಹಿತರು ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸುತ್ತಿದ್ದ. ಈ ಸಂದರ್ಭದಲ್ಲಿ ವೇದಿಕೆಯಲ್ಲೇ ರಾಜೇಶ್ ಅವರು ದಿಢೀರ್ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾಗಿ ವೈದ್ಯರು ಘೋಷಿಸಿದರು.ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.
ರಾಜೇಶ್ ಕುಮಾರ್ ಬರೇಲಿಯಲ್ಲಿ ಸಣ್ಣ ಉದ್ಯಮಿಯಾಗಿದ್ದು, ಸ್ಥಳೀಯ ಸಮುದಾಯದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅವರ ಸಾವು ಕುಟುಂಬಕ್ಕೆ ಭಾರೀ ಆಘಾತ ಉಂಟು ಮಾಡಿದೆ. ಅವರ ಪತ್ನಿ ರೇಖಾ ಮಾತನಾಡಿ, “ಅವರು ಆರೋಗ್ಯವಾಗಿದ್ದರು, ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ. ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ಇದು ನಂಬಲಾಗದಷ್ಟು ಆಘಾತಕಾರಿ” ಎಂದು ಹೇಳಿ ಕಣ್ಣೀರಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 22 ವರ್ಷದ ಮಗ ಮತ್ತು 19 ವರ್ಷದ ಮಗಳು.
ಆರೋಗ್ಯ ತಜ್ಞರ ಅಭಿಪ್ರಾಯ
ವೈದ್ಯರು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಹೃದಯಾಘಾತವು ಯಾವುದೇ ಲಕ್ಷಣಗಳಿಲ್ಲದೇ ಇದ್ದಕ್ಕಿದ್ದಂತೆ ಸಂಭವಿಸಬಹುದು ಎಂದು ತಿಳಿಸಿದ್ದಾರೆ. ಬರೇಲಿಯ ಆರೋಗ್ಯ ಕೇಂದ್ರದ ಡಾ. ಅಮಿತ್ ಸಿಂಗ್ ಹೇಳುವ ಪ್ರಕಾರ, “ಒತ್ತಡ, ಆಯಾಸ ಅಥವಾ ಭಾವನಾತ್ಮಕ ಉತ್ಸಾಹವು ಕೆಲವೊಮ್ಮೆ ಹೃದಯದ ಮೇಲೆ ಒತ್ತಡವನ್ನುಂಟುಮಾಡಿ, ಹಿಂದೆ ಗುರುತಿಸದ ಹೃದಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು.” ಇಂತಹ ಸಂದರ್ಭಗಳಲ್ಲಿ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.
ಹೃದಯಾಘಾತದ ಸರಣಿ
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಫೆಬ್ರವರಿ 2025ರಲ್ಲಿ, ಮಧ್ಯಪ್ರದೇಶದ ವಿದಿಶಾದಲ್ಲಿ 23 ವರ್ಷದ ಯುವತಿ ಪರಿಣೀತ ಜೈನ್ ತನ್ನ ಸಂಬಂಧಿಕರ ವಿವಾಹ ಸಮಾರಂಭದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಳು. ಅದೇ ತಿಂಗಳಲ್ಲಿ ಇಂದೋರ್‌ನಲ್ಲಿ 73 ವರ್ಷದ ವ್ಯಕ್ತಿಯೊಬ್ಬರು ಯೋಗ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಎಕ್ಸ್‌ನಲ್ಲಿ ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ. “25 ವರ್ಷಗಳ ಸಂತೋಷದ ಜೀವನದ ನಂತರ ಇಂತಹ ದುರಂತ ಸಂಭವಿಸಿರುವುದು ತುಂಬಾ ದುಃಖಕರ” ಎಂದಿದ್ದಾರೆ. “ಇದು ನಮಗೆ ಆರೋಗ್ಯದ ಮೇಲೆ ಗಮನ ಕೊಡುವಂತೆ ಎಚ್ಚರಿಕೆ ನೀಡುವಂಥ ಘಟನೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.