ನವದೆಹಲಿ: ಲೋಕಸಭೆಯ ಬಳಿಕ ರಾಜ್ಯಸಭೆಯಲ್ಲೂ ವಕ್ಫ್ (ತಿದ್ದುಪಡಿ) ಮಸೂದೆಗೆ ಅಂಗೀಕಾರ ದೊರೆತಿದೆ. ಗುರುವಾರ ತಡರಾತ್ರಿವರೆಗೆ ಮಸೂದೆ ಕುರಿತು ಚರ್ಚೆ ನಡೆದ ಬಳಿಕ ಮಸೂದೆ ಪರವಾಗಿ 128 ಸದಸ್ಯರು ಮತ ಚಲಾಯಿಸಿದರು. ಹಾಗೆಯೇ, 95 ಸದಸ್ಯರು ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿದರು. ಪರವಾಗಿ ಹೆಚ್ಚು ಮತಗಳು ಲಭಿಸಿದ ಕಾರಣ ಮಸೂದೆ ಅಂಗೀಕಾರವಾಯಿತು. ಇದಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮಸೂದೆ ಕುರಿತು ಮಾತನಾಡಿದ್ದು, “ಮುಸ್ಲಿಮರ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದ್ದಾರೆ.
“ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ದೊರೆತಿರುವುದು ಐತಿಹಾಸಿಕ ನಿರ್ಣಯವಾಗಿದೆ. ಮುಸ್ಲಿಮರ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಸಾಮಾಜಿಕ-ಆರ್ಥಿಕ ನ್ಯಾಯಕ್ಕೆ ಮಸೂದೆಯು ದ್ಯೋತಕವಾಗಿದ್ದು, ಬಡವರಿಗೆ ಇದರಿಂದ ಅನುಕೂಲವಾಗಲಿದೆ. ದಶಕಗಳಿಂದ ಅವಕಾಶ ವಂಚಿತರಿಗೂ ಮಸೂದೆಯು ನೆರವಾಗಲಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಪೋಸ್ಟ್ ಮಾಡಿದ್ದಾರೆ.
“ಮಸೂದೆ ಕುರಿತು ಚರ್ಚೆಯಲ್ಲಿ ಭಾಗವಹಿಸಿದ ಸಂಸತ್ತಿನ ಎಲ್ಲ ಸದಸ್ಯರಿಗೆ ಧನ್ಯವಾದಗಳು. ಹಾಗೆಯೇ, ಸಂಸದೀಯ ಸಮಿತಿಯ ತೀರ್ಮಾನದಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ಕೃತಜ್ಞತೆಗಳು. ಸಮಗ್ರ ಚರ್ಚೆಯ ಬಳಿಕವೇ ಮಸೂದೆಗೆ ಅಂಗೀಕಾರ ದೊರೆತಿರುವುದು ಸಮಾಧಾನ ತಂದಿದೆ. ಹಲವು ದಶಕಗಳಿಂದ ವಕ್ಫ್ ಮಂಡಳಿಯಲ್ಲಿ ಪಾರದರ್ಶಕತೆಯ ಕೊರತೆ ಇತ್ತು. ಇದರಿಂದ ಬಡ ಮುಸ್ಲಿಮರು ಹಾಗೂ ಮಹಿಳೆಯರಿಗೆ ತೊಂದರೆಯಾಗಿತ್ತು. ಈಗ ಮಸೂದೆಯಿಂದ ಎಲ್ಲರಿಗೂ ಸಮಾನ ಹಕ್ಕುಗಳು ದೊರೆಯಲಿವೆ” ಎಂದು ತಿಳಿಸಿದ್ದಾರೆ.
ಮುಂದೇನಾಗುತ್ತದೆ?
ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿದ್ದು, ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕಾರ ನೀಡಿದ ಬಳಿಕ ಮಸೂದೆಯು ಕಾಯ್ದೆಯಾಗಲಿದೆ. ರಾಷ್ಟ್ರಪತಿ ಅಂಕಿತದ ಬಳಿಕ ಕೇಂದ್ರ ಸರ್ಕಾರವು ಗೆಜೆಟ್ ನೋಟಿಫಿಕೇಶನ್ ಹೊರಡಿಸಲಿದೆ.