ನವದೆಹಲಿ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಮುಖಭಂಗ ಎಂಬಂತೆ, ರಾಜ್ಯದ ಶಾಲಾ ಸೇವಾ ಆಯೋಗದ ಅಡಿಯಲ್ಲಿ 25,000ಕ್ಕೂ ಹೆಚ್ಚು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಯನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್(Supreme Court) ಗುರುವಾರ ಎತ್ತಿಹಿಡಿದಿದೆ. ಇಡೀ ಆಯ್ಕೆ ಪ್ರಕ್ರಿಯೆಯು “ವಂಚನೆ”ಯಿಂದ ಕೂಡಿದ್ದು, ಅದರ ವಿಶ್ವಾಸಾರ್ಹತೆ ಮತ್ತು ನ್ಯಾಯಸಮ್ಮತತೆಯನ್ನೂ “ದುರ್ಬಲಗೊಳಿಸಲಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ.ವಿ.ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠವು, ಈ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶದಲ್ಲಿ ನಾವು ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ. ಇಡೀ ನೇಮಕಾತಿ ಪ್ರಕ್ರಿಯೆಯೇ ವಂಚನೆ ಮತ್ತು ಮೋಸದಿಂದ ಕೂಡಿದೆ ಎಂದೂ ಅಭಿಪ್ರಾಯಪಟ್ಟಿದೆ.
ಜೊತೆಗೆ, ಮೂರು ತಿಂಗಳೊಳಗೆ ಹೊಸದಾಗಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದೂ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ. ಈ ಹೊಸ ಪ್ರಕ್ರಿಯೆಯಲ್ಲಿ ಉತ್ತೀರ್ಣರಾದವರು 2016ರಲ್ಲಿ ನೇಮಕವಾದಾಗಿನಿಂದ ಪಡೆದ ವೇತನವನ್ನು ಈಗ ಹಿಂದಿರುಗಿಸಬೇಕಾದ ಅಗತ್ಯವಿಲ್ಲ. ಆದರೆ, ಯಾರು ಉತ್ತೀರ್ಣರಾಗುವುದಿಲ್ಲವೋ ಅವರು 2016ರಿಂದೀಚೆಗೆ ಪಡೆದ ವೇತನವನ್ನು ವಾಪಸ್ ನೀಡಬೇಕು ಎಂದೂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಇದೇ ವೇಳೆ, ನ್ಯಾಯಾಲಯವು ವಿಕಲಾಂಗ ವ್ಯಕ್ತಿಗಳಿಗೆ ವಿನಾಯಿತಿ ನೀಡಿದ್ದು, ಅವರು ತಮ್ಮ ಪ್ರಸ್ತುತ ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಹೇಳಿದೆ.
25 ಸಾವಿರಕ್ಕೂ ಅಧಿಕ ಸಿಬ್ಬಂದಿಯ ನೇಮಕವನ್ನು ರದ್ದು ಮಾಡಿದ್ದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅಲ್ಲದೇ ಸಿಬ್ಬಂದಿಯನ್ನು ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸುವಂತೆ ಒತ್ತಾಯಿಸಿತ್ತು.
2016ರಲ್ಲಿ 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ರಾಜ್ಯಮಟ್ಟದ ಆಯ್ಕೆ ಪರೀಕ್ಷೆಗೆ ಹಾಜರಾಗಿದ್ದರು. ಆ ಸಮಯದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 24,640 ಆಗಿತ್ತು. ಆದರೆ ಸರ್ಕಾರವು 25,753 ನೇಮಕಾತಿ ಪತ್ರಗಳನ್ನು ವಿತರಿಸಿತ್ತು. ಅಂದರೆ, ಸರ್ಕಾರವು ಈ ಸೂಪರ್ ನ್ಯೂಮೆರಿಕ್(ಅಗತ್ಯಕ್ಕಿಂತ ಹೆಚ್ಚಿನ ಹುದ್ದೆಗಳ ಸೃಷ್ಟಿ) ಹುದ್ದೆಗಳ ಮೂಲಕ ಅಕ್ರಮ ನೇಮಕಾತಿಗೆ ಅವಕಾಶ ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿಬಂದಿತ್ತು.
ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳು ಹೊರಬೀಳುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗತೊಡಗಿತ್ತು. ಕೊನೆಗೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತ, ಮಾಜಿ ಶಿಕ್ಷಣ ಸಚಿವ ಸೇರಿದಂತೆ ಪಕ್ಷದ ಹಲವು ಪ್ರಮುಖ ನಾಯಕರು ಜೈಲು ಸೇರಿದ್ದರು.
ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ ಅಮಿತ್ ಮಾಳವೀಯ ಅವರು, “ಇದು ಮಮತಾ ಬ್ಯಾನರ್ಜಿಗೆ ಆದ ಹೀನಾಯ ಸೋಲು” ಎಂದು ಬಣ್ಣಿಸಿದ್ದಾರೆ. “ಮಮತಾ ಬ್ಯಾನರ್ಜಿ ಅವರ ನಿಕಟವರ್ತಿ, ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಪಾರ್ಥ ಚಟರ್ಜಿ ಅವರು ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಈಗಾಗಲೇ ಜೈಲಿನಲ್ಲಿದ್ದಾರೆ. ಸಾವಿರಾರು ಯುವಕರ ವೃತ್ತಿಜೀವನವನ್ನು ನಾಶ ಮಾಡಿದ ಈ ಬೃಹತ್ ವಂಚನೆಯಲ್ಲಿ ಮುಖ್ಯಮಂತ್ರಿಯನ್ನೂ ಹೊಣೆಗಾರರನ್ನಾಗಿ ಮಾಡಬೇಕು. ಮಮತಾ ಬ್ಯಾನರ್ಜಿ ಅವರೂ ವಿಚಾರಣೆಯನ್ನು ಎದುರಿಸಬೇಕು” ಎಂದು ಆಗ್ರಹಿಸಿದ್ದಾರೆ.