• ಅರ್ಧನಾರೀಶ್ವರ; ಕರ್ನಾಟಕ ಕಲಾಶ್ರೀ ಶರ್ಮಿಲಾ ಮುಖರ್ಜಿ ಶಿಷ್ಯರಾದ ಸುರಜಿತ್ ಮತ್ತು ಶ್ರೀಜಿತ ಅವರ ಯುಗಳ ನೃತ್ಯ
• ನೃತ್ಯಗ್ರಾಮ್ ಸಮೂಹದಿಂದ ಒಡಿಸ್ಸಿ ಪ್ರದರ್ಶನ
• ಪ್ರತಿಭಾ ರಾಮಸ್ವಾಮಿಯವರ ‘ಕೃಷ್ಣಕುಮಾರಿ’ ನೃತ್ಯ
ಬೆಂಗಳೂರು, ಏಪ್ರಿಲ್ 2, 2025: ‘ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್’ ತನ್ನ ವಾರ್ಷಿಕ ‘ಪ್ರವಾಹ್ ನೃತ್ಯೋತ್ಸವ’ವನ್ನು ಏಪ್ರಿಲ್ 12ರಂದು ಎಡಿಎ ರಂಗ ಮಂದಿರದಲ್ಲಿ ಆಯೋಜಿಸಿದೆ. ಪ್ರಸಿದ್ಧ ಒಡಿಸ್ಸಿ ನೃತ್ಯ ಗುರು ಕೇಳುಚರಣ್ ಮೊಹಾಪಾತ್ರ ಅವರಿಗೆ ಅರ್ಪಿತವಾಗಿರುವ ಈ ಕಾರ್ಯಕ್ರಮ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಈ ಶಾಸ್ತ್ರೀಯ ನೃತ್ಯ ಪ್ರಕಾರದ ಈ ಕಾರ್ಯಕ್ರಮ ನೃತ್ಯಪ್ರೇಮಿಗಳಿಗೆ ಅಪೂರ್ವ ಅನುಭವ ನೀಡಲಿದೆ.
ಒಡಿಸ್ಸಿ ನೃತ್ಯಕ್ಕೆ ಗುರು ಕೇಳುಚರಣ್ ಮೊಹಾಪಾತ್ರ ಅವರ ಕೊಡುಗೆ ಅಮೂಲ್ಯವಾದುದು. ಅವರ ಸೃಜನಶೀಲ ಸಂಯೋಜನೆಗಳು ಮತ್ತು ಬೋಧನ ಪದ್ಧತಿ ಈ ನೃತ್ಯ ಪ್ರಕಾರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಸಂಜಲಿ ಸೆಂಟರ್ ಅವರ ಈ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಮತ್ತು ಬೆಂಗಳೂರಿನ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಒಡಿಸ್ಸಿ ನೃತ್ಯವನ್ನು ಸಮ್ಮಿಲನಗೊಳಿಸುವ ಉದ್ದೇಶದಿಂದ ‘ಪ್ರವಾಹ್ ನೃತ್ಯೋತ್ಸವ’ ಆಯೋಜಿಸಿದೆ.

ಪ್ರವಾಹ್ ನೃತ್ಯೋತ್ಸವದ 2025ರ ಪ್ರದರ್ಶನಗಳು
ಅರ್ಧನಾರೀಶ್ವರ
ಕಾರ್ಯಕ್ರಮದ ಮುಖ್ಯ ಆಕರ್ಷಣೆಯೆಂದರೆ ‘ಅರ್ಧನಾರೀಶ್ವರ’ – ಕರ್ನಾಟಕ ಕಲಾಶ್ರೀ ಶರ್ಮಿಳಾ ಮುಖರ್ಜಿ ಅವರ ಶಿಷ್ಯರಾದ ಸುರಜಿತ್ ಮತ್ತು ಶ್ರೀಜಿತಾ ಅವರ ಜೋಡಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ನೃತ್ಯವು ಪುರುಷ ಮತ್ತು ಸ್ತ್ರೀ ದೈವಿಕ ಶಕ್ತಿಗಳ ಸಮನ್ವಯವನ್ನು ಸುಂದರವಾಗಿ ಚಿತ್ರಿಸುತ್ತದೆ ಹಾಗೂ ಬ್ರಹ್ಮಾಂಡದ ಸಮತೋಲನ ಮತ್ತು ಐಕ್ಯತೆಯನ್ನು ಸಂಕೇತಿಸುತ್ತದೆ. ಗುರು ಮೊಹಾಪಾತ್ರ ಅವರಿಂದ ನೃತ್ಯ ಸಂಯೋಜನೆಗೊಂಡ ಈ ಕೃತಿ ,ಒಡಿಸ್ಸಿ ನೃತ್ಯದ ಸಾಹಿತ್ಯಿಕ ಲಾಲಿತ್ಯ ಮತ್ತು ಅಭಿವ್ಯಕ್ತಿಯನ್ನು ತೋರಿಸುತ್ತದೆ.
ನೃತ್ಯಗ್ರಾಮ್ ಸಮೂಹದಿಂದ ಒಡಿಸ್ಸಿ ನೃತ್ಯ
ಪ್ರಖ್ಯಾತ ‘ನೃತ್ಯಗ್ರಾಮ್ ತಂಡವು ಉತ್ಸವದಲ್ಲಿ ಮನಸೆಳೆಯುವ ಒಡಿಸ್ಸಿ ನೃತ್ಯಪ್ರದರ್ಶನ ನೀಡಲಿದೆ. ಈ ಪ್ರದರ್ಶನವು ಒಡಿಸಿ ನೃತ್ಯದ ಶೈಲಿ, ಲಾಲಿತ್ಯ ಹಾಗೂ ಕಥನ ಸಾಮರ್ಥ್ಯವನ್ನು ಪ್ರದರ್ಶಿಸುವುದರೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯನ್ನು ಉಣಬಡಿಸುತ್ತದೆ. ನೃತ್ಯಗ್ರಾಮ್ ತಂಡ ತಮ್ಮ ವಿಶಿಷ್ಟ ಸಂಯೋಜನೆಗಳು ಹಾಗೂ ಚಲನಶೀಲತೆಯಿಂದ ಪ್ರಸಿದ್ಧವಾಗಿದ್ದು ಸುಂದರವಾಗಿ ಸಂಯೋಜನೆಗೊಂಡಿದೆ.
ಕೃಷ್ಣಕುಮಾರಿ’ ; ಪ್ರತಿಭಾ ರಾಮಸ್ವಾಮಿ ಅವರ ಏಕಪಾತ್ರಾಭಿನಯ
ಪ್ರಸಿದ್ಧ ನರ್ತಕಿ ಪ್ರತಿಭಾ ರಾಮಸ್ವಾಮಿ ಅವರು ರಾಜಕುಮಾರಿ ಕೃಷ್ಣಕುಮಾರಿಯವರ ಹೃದಯಸ್ಪರ್ಶಿ ಕಥೆಯನ್ನು ಒಡಿಸ್ಸಿ ನೃತ್ಯದ ಮೂಲಕ ಪ್ರಸ್ತುತಪಡಿಸಲಿದ್ದಾರೆ. ಅಪ್ರತಿಮ ಸೌಂದರ್ಯ ಹೊಂದಿದ್ದ ರಾಜಕುಮಾರಿ ಅಧಿಕಾರದ ಕ್ರೂರ ಹೋರಾಟದ ಬಲೆಯಲ್ಲಿ ಸಿಕ್ಕಿಬಿದ್ದ ಕತೆ ಇದಾಗಿದೆ. ಈ ಪ್ರದರ್ಶನವು ಅಧಿಕಾರ ಮತ್ತು ತ್ಯಾಗದ ಸಾರ್ವಕಾಲಿಕ ವಿಷಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ರಾಮಸ್ವಾಮಿ ಅವರು ಕೃಷ್ಣಕುಮಾರಿಯ ಸಂಕಟ ಮತ್ತು ಆಂತರಿಕ ಹೋರಾಟವನ್ನು ನೃತ್ಯದ ಮೂಲಕ ಅಭಿವ್ಯಕ್ತಿಸಲಿದ್ದಾರೆ.
ರಾಜಕೀಯ ಸಂಕೀರ್ಣತೆಗಳಲ್ಲಿ ಸಿಲುಕಿಕೊಂಡ ಯುವತಿಯ ಸಂಘರ್ಷವನ್ನು ಚಿತ್ರಿಸುವ ಈ ಪ್ರದರ್ಶನ, ಇಂದಿನ ಸಮಾಜದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳಿಗೆ ಕನ್ನಡಿಯಾಗಿ ನಿಲ್ಲುತ್ತದೆ.
ಕಾರ್ಯಕ್ರಮದ ವಿವರಗಳು
ದಿನಾಂಕ: ಏಪ್ರಿಲ್ 12, 2025
ಸ್ಥಳ: ಎಡಿಎ ರಂಗ ಮಂದಿರ, ಬೆಂಗಳೂರು
ಸಮಯ: ಸಂಜೆ 6 ಗಂಟೆ
ಟಿಕೆಟ್: 600 ರೂಪಾಯಿ (Bookmyshowದಲ್ಲಿ ಲಭ್ಯ)