ಬೆಂಗಳೂರು: ದೇಶಾದ್ಯಂತ ಎಟಿಎಂ, ಯುಪಿಐ ಮೂಲಕ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡುವ ವ್ಯವಸ್ಥೆ ಜಾರಿಗೆ ಬರಲು ಇನ್ನೂ ಎರಡು-ಮೂರು ತಿಂಗಳು ಬೇಕಾಗುತ್ತದೆ. ಆದರೆ, ಈಗ ತುರ್ತಾಗಿ ಹಣ ಬೇಕಾಗಿದೆ. ಆದರೆ, ಪಿಎಫ್ ಖಾತೆಯಿಂದ ಕ್ಷಿಪ್ರವಾಗಿ ಹೇಗೆ ತೆಗೆಯಬೇಕು ಎಂದು ಯೋಚಿಸುತ್ತಿದ್ದೀರಾ? ಆ ಯೋಚನೆಯೇ ಈಗ ಬೇಡ. ಕೇವಲ ಮೂರು ದಿನಗಳಲ್ಲಿ ಪಿಎಫ್ ಹಣವನ್ನು ಈಗ ಕ್ಲೇಮ್ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಹೌದು, ಪಿಎಫ್ ಖಾತೆದಾರರು https://www.epfindia.gov.in/ ಇಪಿಎಫ್ಒ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಆನ್ ಲೈನ್ ನಲ್ಲೇ ಕ್ಲೇಮ್ ಸಲ್ಲಿಸಬಹುದಾಗಿದೆ. ಪಿಎಫ್ ಖಾತೆಯ ಶೇ. 60ರಷ್ಟು ಹಣದ ವಿಲೇವಾರಿಯನ್ನು ತ್ವರಿತಗೊಳಿಸಲಾಗುತ್ತಿದೆ. 1 ಲಕ್ಷ ರೂ.ವರೆಗಿನ ಹಣ ಹಿಂಪಡೆ ಅರ್ಜಿಗಳನ್ನು ಮೂರೇ ದಿನದಲ್ಲಿ ಇತ್ಯರ್ಥಗೊಳಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲದೆ, ಆಸ್ಪತ್ರೆಯ ಖರ್ಚು ವೆಚ್ಚಗಳಿಗಾಗಿ, ಮನೆ ಖರೀದಿಗಾಗಿ, ಮಕ್ಕಳ ವಿದ್ಯಾಭ್ಯಾಸದ ಖರ್ಚುಗಳಿಗಾಗಿ, ಮಕ್ಕಳ ಮದುವೆಗಳಿಗಾಗಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡುವುದಿದ್ದರೆ ಆ ಹಣ ಕ್ಷಿಪ್ರವಾಗಿ ಸಿಗಲಿದೆ.
ಹಣವನ್ನು ಕ್ಲೈಮ್ ಮಾಡುವಾಗ ನಿಮ್ಮ ಚೆಕ್ ಬುಕ್ ಹಾಗೂ ಬ್ಯಾಂಕ್ ಪಾಸ್ ಬುಕ್ ಗಳನ್ನು ಪಿಎಫ್ ನಲ್ಲಿ ಸಲ್ಲಿಸಿರಬೇಕು. ಇನ್ನು ಕೆವೈಸಿ ಅಪ್ಡೇಟ್ ಮಾಡಿದ್ದವರು ಕ್ಲೈಮ್ ಗಳಿಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಂಥ ಅರ್ಜಿಗಳು ಬೇಗನೇ ವಿಲೇವಾರಿ ಆಗುತ್ತವೆ. ಕ್ಲೈಮ್ ಸಲ್ಲಿಸುವ ಮೊದಲು ತಾವು ಎಷ್ಟು ಮೊತ್ತಕ್ಕೆ ಕ್ಲೈಮ್ ಸಲ್ಲಿಸಲು ಅರ್ಹರು ಎಂಬುದನ್ನು ಖಾತೆದಾರರು ತಿಳಿದುಕೊಳ್ಳಬೇಕಾಗುತ್ತದೆ.
ಅಷ್ಟೇ ಅಲ್ಲ, ನಿಮ್ಮ ಖಾತೆಯಲ್ಲಿ ಆಗಿರುವ ತಪ್ಪುಗಳನ್ನು ನೀವೇ ಆನ್ ಲೈನ್ ನಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ. ಈ ಹೊಸ ನಿಯಮ ಇದೇ ಏಪ್ರಿಲ್ 1ರಿಂದ ಜಾರಿಗೆ ತರಲಾಗಿದೆ. ನಿಮ್ಮ ಪಿಎಫ್ ಖಾತೆಗೆ ಯುಎಎನ್ ನಂಬರ್ ಇದ್ದರೆ, ಆ ನಂಬರ್ ಆಧಾರ್ ನಂಬರ್ ಗೆ ಲಿಂಕ್ ಆಗಿದ್ದರೆ, ಅಂಥ ಖಾತೆಗಳನ್ನು ಓಪನ್ ಮಾಡಿ, ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ತಿದ್ದುಪಡಿ ಮಾಡುವುದು ಹಾಗೂ ಕಾಲಕ್ಕೆ ತಕ್ಕಂತೆ ಹೊಸ ಮಾಹಿತಿಗಳನ್ನು ನೀವೇ ಮಾಡಿಕೊಳ್ಳಬಹುದು. ಅದಕ್ಕಾಗಿ ಇನ್ನು ಪಿಎಫ್ ಕಚೇರಿಗೆ ಹೋಗುವ ಅಗತ್ಯವಿಲ್ಲ.