ಬೆಂಗಳೂರು: ಸ್ಯಾಂಡಲ್ ವುಡ್ ಕಲಾವಿದರ ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಏಪ್ರಿಲ್ 28 ರಿಂದ ದುಬೈನ ಶಾರ್ಜಾ ಮೈದಾನದಲ್ಲಿ ಕ್ರಿಕೆಟ್ ಟೂರ್ನಿ ನಡೆಯಲಿದೆ.
ದುಬೈನಲ್ಲಿರುವ ಅನಿವಾಸಿ ಕನ್ನಡಿಗರು ಸ್ಯಾಂಡಲ್ ವುಡ್ ನಟನಟಿಯರನ್ನು ಹಾಗೂ ತಂತ್ರಜ್ಞರನ್ನು ಒಂದೇ ವೇದಿಕೆಯಲ್ಲಿ ಕಂಡು ಸಂಭ್ರಮಿಸುವಂತೆ ಮಾಡುವ ಸಲುವಾಗಿ ಕರ್ನಾಟಕ ಸೆಲೆಬ್ರಿಟಿ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ.
ಮೈಸೂರು ನಗರದ ಖಾಸಗಿ ಹೋಟೆಲ್ ನಲ್ಲಿ ತಂಡದ ಆಟಗಾರರ ಹರಾಜು ಪ್ರಕ್ರಿಯೆ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಶಾಸಕ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಟ ಡಾರ್ಲಿಂಗ್ ಕೃಷ್ಣ, ರವಿ ಚೇತನ್, ನಿರ್ದೇಶಕ ತರುಣ್ ಸುಧೀರ್, ಪವನ್ ಒಡೆಯರ್, ಅನಿವಾಸಿ ಕನ್ನಡಿಗ ಮಯೂರ್ ಮಾಸ್ಟರ್, ಅನಿವಾಸಿ ಕನ್ನಡಿಗ ಸಿರಾಜ್, ಅನಿವಾಸಿ ಕನ್ನಡಿಗ ಶ್ರೀನಿಧಿ ಸೇರಿದಂತೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅವರು ದುಬೈನಲ್ಲಿರುವ ಅನಿವಾಸಿ ಕನ್ನಡಿಗರು ಒಂದುಗೂಡಿ ಕರ್ನಾಟಕ ಸೆಲೆಬ್ರಿಟಿ ಲೀಗ್(KCL) ಸೀಸನ್ 1 ಆಯೋಜಿಸುತ್ತಿದ್ದಾರೆ. ಏಪ್ರಿಲ್ 28 ರಿಂದ ಮೇ 3 ರ ವರೆಗೂ ದುಬೈನ ಶಾರ್ಜಾ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಮಾತ್ರ ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.