ಶಿವಮೊಗ್ಗ: ಹಿಂದೂ ಹುಲಿಯನ್ನು ಬಿಜೆಪಿ ಬೋನಿಗೆ ಹಾಕಿದೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಎಂಬ ಹಿಂದೂ ಹುಲಿಯನ್ನು ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರು ಬೋನಿನಲ್ಲಿ ಹಾಕಿದ್ದಾರೆ. ಯತ್ನಾಳ್ ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಬೈದಿದ್ದಾರೆ. ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಬೈದಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದ ಅನಂತ್ ಕುಮಾರ್ ಹೆಗಡೆ, ಈಶ್ವರಪ್ಪ, ಪ್ರತಾಪ್ ಸಿಂಹನನ್ನು ಈಗಾಗಲೇ ಮುಗಿಸಿದ್ದಾರೆ. ಮುಂದೆ ಸಿಟಿ ರವಿಯನ್ನು ಕೂಡ ಮುಗಿಸಬಹುದು ಎಂದು ಆರೋಪಿಸಿದ್ದಾರೆ.
ಈಶ್ವರಪ್ಪ ಏನು ತಪ್ಪು ಮಾಡಿದ್ದರು? ಟಿಕೆಟ್ ಕೇಳಿದೆ ತಪ್ಪಾ? ಇಡೀ ಜಿಲ್ಲೆಯಲ್ಲಿ ಹಿಂದುತ್ವ ಪ್ರತಿಪಾದನೆ ಮಾಡುತ್ತಿದ್ದ ಈಶ್ವರಪ್ಪನವರನ್ನೇ ಹೊರಹಾಕಿದ ಮೇಲೆ ಯತ್ನಾಳರನ್ನು ಬಿಡುತ್ತಾರಾ? ಇದೇ ರೇಣುಕಾಚಾರ್ಯ ನಮ್ಮನ್ನೆಲ್ಲ ಹೈದರಾಬಾದ್ ಗೆ ಕರೆದುಕೊಂಡು ಹೋದಾಗ ಅಪ್ಪ- ಮಕ್ಕಳನ್ನು ಚಡ್ಡಿ ಬಿಚ್ಚುತ್ತೇನೆ ಎಂದಿದ್ದ. ಅಷ್ಟೆಲ್ಲ ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಬೈದಿದ್ದ ರೇಣುಕಾಚಾರ್ಯನನ್ನು ಹತ್ತಿರ ಇಟ್ಟುಕೊಂಡು ಬಿಎಸ್‍ವೈ ಮಾನಸ ಪುತ್ರ ಎನ್ನುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಯತ್ನಾಳ್ ಹಿಂದೆ ಪಂಚಮಸಾಲಿ ಸಮಾಜವಿದೆ. ಅವರ ಪರವಾಗಿ ಹೋರಾಟ ಮಾಡುವುದಾಗಿ ಈಗಾಗಲೇ ಪಂಚಮಸಾಲಿ ಗುರುಗಳು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಈ ರೀತಿ ಗೊಂದಲದ ಗೂಡಾಗಿದೆ. ಇದರಿಂದ ನಮಗೇನು ಸಮಸ್ಯೆ ಇಲ್ಲ. ನಾವು 18 ಶಾಸಕರನ್ನು ಅಮಾನತ್ತು ಮಾಡಿದ್ದಕ್ಕೆ ದೊಡ್ಡ ವಿಷಯ ಮಾಡಿದಿರಿ. ಈಗ ಯತ್ನಾಳ್ರನ್ನು ಹೊರ ಹಾಕಿದ್ದಾರಲ್ಲ. ಯೋಗಿ ಆದಿತ್ಯನಾಥ ಅಂತವರನ್ನು ಬಿಜೆಪಿ ಹೊರ ಹಾಕುತ್ತದೆ. ರಾಹುಲ್ ಗಾಂಧಿಯನ್ನು ಹೊಗಳಿದ್ದು ನೋಡಿದರೆ ಯೋಗಿ ಆದಿತ್ಯನಾಥ ರವರನ್ನು ತೆಗೆಯುತ್ತಾರೆ. ಬಿ.ವೈ. ವಿಜಯೇಂದ್ರ ಈಗ ಗೆದ್ದಂತೆ ಅಲ್ಲ. ಅವರಿಗೆ ಪವರ್ ಇದೆ. ಯಡಿಯೂರಪ್ಪ ಮತ್ತು ಅವರ ಮಕ್ಕಳ ಬಳಿ 3,500 ಕೋಟಿ ರೂ. ಹಡಬೆ ದುಡ್ಡಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಯಡ್ಯೂರಪ್ಪ ಮತ್ತು ಅವರ ಮಕ್ಕಳು ನನ್ನನ್ನೂ ಮುಗಿಸಲು ಪ್ರಯತ್ನಿಸಿದರು. ಆದರೆ, ಯಾರನ್ನು ಮುಗಿಸಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿವಸ ಇವರು ಕೂಡ ಹೊರಗೆ ಹೋಗುತ್ತಾರೆ. ಕಾಂಗ್ರೆಸ್ ಪಕ್ಷದಲ್ಲೂ ಕೂಡ ಗೊಂದಲವಿದೆ. ಆದರೆ, ಹೈಕಮಾಂಡ್ ಈ ಗೊಂದಲ ಬಗೆಹರಿಸಬೇಕು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದಿದ್ದಾರೆ.