ವಾಷಿಂಗ್ಟನ್: ಮತ್ತೊಂದು ಸುತ್ತಿನ “ಸುಂಕ ದಾಳಿ” ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಾಹನಗಳ ಆಮದಿನ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸಿ ಆದೇಶ ಹೊರಡಿಸಿದ್ದಾರೆ. ಇದು ಭಾರತ ಸೇರಿದಂತೆ ಅಮೆರಿಕದ ಜೊತೆ ವ್ಯಾಪಾರ ಸಂಬಂಧ ಹೊಂದಿರುವ ದೇಶಗಳಲ್ಲಿ ಗೊಂದಲ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿದೆ.
ಈ ಹಿಂದೆಯೇ ಘೋಷಿಸಿದಂತೆ ಈ ಸುಂಕವು ಏಪ್ರಿಲ್ 2 ರಿಂದ ಜಾರಿಗೆ ಬರಲಿದೆ, ಏರ್ಪಿಲ್ 2 ಅನ್ನು ಅಮೆರಿಕದ “ವಿಮೋಚನಾ ದಿನ” ಎಂದು ಟ್ರಂಪ್ ಘೋಷಿಸಿದ್ದು, ಅದೇ ದಿನದಿಂದ ಹೆಚ್ಚುವರಿ ಸುಂಕ ಆದೇಶ ಅನುಷ್ಠಾನಗೊಳ್ಳಲಿದೆ. ವಿದೇಶಿ ನಿರ್ಮಿತ ಕಾರುಗಳು ಮತ್ತು ಲಘು ಟ್ರಕ್‌ಗಳ ಮೇಲೆ ಈ ಸುಂಕ ಪರಿಣಾಮ ಬೀರಲಿದೆ. ಈಗಾಗಲೇ ಇಂತಹ ಸರಕುಗಳ ಮೇಲೆ ಸುಂಕ ವಿಧಿಸಲಾಗುತ್ತಿತ್ತು. ಆದರೆ, ಈಗ ಸುಂಕದ ಮೊತ್ತ ಹೆಚ್ಚಳವಾದಂತಾಗಿದೆ.
“ಅಮೆರಿಕದಲ್ಲಿ ತಯಾರಾಗದ ಎಲ್ಲ ಕಾರುಗಳಿಗೂ ನಾವು ಶೇಕಡಾ 25ರಷ್ಟುಸುಂಕ ವಿಧಿಸುತ್ತಿದ್ದೇವೆ. ಈ ಕಾರುಗಳನ್ನು ಅಮೆರಿಕದಲ್ಲೇ ತಯಾರಿಸಿದರೆ, ಅದಕ್ಕೆ ಸುಂಕವಿರುವುದಿಲ್ಲ” ಎಂದು ಟ್ರಂಪ್ ಶ್ವೇತಭವನದಲ್ಲಿ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಟ್ರಂಪ್ ಅವರು ಯುಎಸ್‌ನ ಪ್ರಮುಖ ವ್ಯಾಪಾರ ಪಾಲುದಾರರಾದ ಕೆನಡಾ, ಮೆಕ್ಸಿಕೊ ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ ವಿಧಿಸುವ ಮೂಲಕ ವ್ಯಾಪಾರ ಸಮರಕ್ಕೆ ನಾಂದಿ ಹಾಡಿದ್ದಾರೆ. ಜೊತೆಗೆ ಉಕ್ಕು ಮತ್ತು ಅಲ್ಯೂಮಿನಿಯಂ ಆಮದಿನ ಮೇಲೂ 25% ಸುಂಕವನ್ನು ವಿಧಿಸಿದ್ದಾರೆ.
ಈಗ ಸೆಡಾನ್‌ಗಳು, ಎಸ್‌ಯುವಿಗಳು, ಕ್ರಾಸ್ ಓವರ್‌ಗಳು, ಮಿನಿ ವ್ಯಾನ್ ಗಳು, ಸರಕು ವ್ಯಾನ್ ಗಳು ಮತ್ತು ಲಘು ಟ್ರಕ್ ಗಳು ಮುಂತಾದ ಆಮದು ಮಾಡಲಾದ ಪ್ರಯಾಣಿಕ ವಾಹನಗಳು ಹಾಗೂ ಎಂಜಿನ್‌ಗಳು, ಟ್ರಾನ್ಸ್‌ಮಿಷನ್‌ಗಳು, ಪವರ್ ಟ್ರೈನ್ ಭಾಗಗಳು ಮತ್ತು ವಿದ್ಯುತ್ ಘಟಕಗಳಂತಹ ಪ್ರಮುಖ ಆಟೋಮೊಬೈಲ್ ಬಿಡಿಭಾಗಗಳಿಗೆ ಶೇ.25ರ ಸುಂಕ ಅನ್ವಯವಾಗುತ್ತದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಅಗತ್ಯವಿದ್ದರೆ ಹೆಚ್ಚುವರಿ ಬಿಡಿಭಾಗಗಳಿಗೂ ಸುಂಕ ವಿಸ್ತರಿಸಲಾಗುತ್ತದೆ ಎಂದೂ ತಿಳಿಸಿದೆ.
ಸರ್ಕಾರದ ಆದಾಯವನ್ನು ಹೆಚ್ಚಿಸಲು, ಅಮೆರಿಕದ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಅಮೆರಿಕದ ಹಾದಿಗೆ ಇತರೆ ದೇಶಗಳನ್ನು ತರುವ ನಿಟ್ಟಿನಲ್ಲಿ ಈ ಸುಂಕ ವಿಧಿಸಲಾಗುತ್ತಿದೆ ಎಂದೂ ಟ್ರಂಪ್ ಆಡಳಿತ ಹೇಳಿದೆ. ಆದರೆ, ಆಮದು ಮಾಡಲಾಗುವ ಕಾರುಗಳ ಮೇಲೆ ಸುಂಕ ವಿಧಿಸಿರುವುದು ಅಮೆರಿಕದ ಮಿತ್ರರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ, ಕೆನಡಾ, ಮೆಕ್ಸಿಕೊ ಮತ್ತು ಜರ್ಮನಿಯಂತಹ ದೇಶಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದ್ದು, ಈ ದೇಶಗಳೊಂದಿಗಿನ ಸಂಬಂಧಗಳೂ ಹದಗೆಡುವ ಸಾಧ್ಯತೆಯಿದೆ.
ಟ್ರಂಪ್ ವಾಹನ ಸುಂಕಕ್ಕೆ ಕೆನಡಾ ಪ್ರತಿಕ್ರಿಯೆ
ಕಾರುಗಳು ಮತ್ತು ಬಿಡಿಭಾಗಗಳ ಮೇಲಿನ ಟ್ರಂಪ್ ಸುಂಕಕ್ಕೆ ಪ್ರತಿಕ್ರಿಯಿಸಿದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ, ಕೆನಡಾ ಶೀಘ್ರದಲ್ಲೇ ಅಮೆರಿಕದ ವಿರುದ್ಧ ಪ್ರತೀಕಾರದ ಸುಂಕ ವಿಧಿಸಲಿದೆ ಎಂದಿದ್ದಾರೆ.
ಟ್ರಂಪ್ ಅವರ ಕ್ರಮವು “ನೇರ ದಾಳಿ” ಎಂದು ಬಣ್ಣಿಸಿರುವ ಕಾರ್ನೆ, ಸದ್ಯದಲ್ಲೇ ಸಂಪುಟ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ. “ನಾವು ನಮ್ಮ ಕಾರ್ಮಿಕರನ್ನು, ನಮ್ಮ ಕಂಪನಿಗಳನ್ನು, ನಮ್ಮ ದೇಶವನ್ನು ರಕ್ಷಿಸುತ್ತೇವೆ. ಎಲ್ಲರೂ ಒಗ್ಗಟ್ಟಾಗಿ ಈ ಕಾರ್ಯ ಮಾಡುತ್ತೇವೆ” ಎಂದೂ ಹೇಳಿದ್ದಾರೆ.