ನವದೆಹಲಿ: ಬೆಲೆಯೇರಿಕೆಯ ಹೊರೆಯಿಂದ ತತ್ತರಿಸಿರುವ ಜನರಿಗೆ ಸರ್ಕಾರ ಮತ್ತೊಂದು ಬರೆ ಎಳೆಯಲು ಮುಂದಾಗಿದೆ. ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಇತರ ಆಂಟಿಬಯೋಟಿಕ್ಸ್ ಸೇರಿದಂತೆ ಸರ್ಕಾರಿ ನಿಯಂತ್ರಿತ ಔಷಧಿಗಳು ಶೀಘ್ರದಲ್ಲೇ ದುಬಾರಿಯಾಗಲಿವೆ(Price Hike) ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ಔಷಧಿಗಳ ಬೆಲೆಯಲ್ಲಿ ಶೇಕಡಾ 1.7ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಈ ಔಷಧಿಗಳ ನಿರೀಕ್ಷಿತ ಹೆಚ್ಚಳದ ಬಗ್ಗೆ ಮಾತನಾಡಿರುವ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ (ಎಐಒಸಿಡಿ) ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್, ಕಚ್ಚಾ ವಸ್ತುಗಳ ವೆಚ್ಚ ಮತ್ತು ಇತರ ವೆಚ್ಚಗಳು ಹೆಚ್ಚುತ್ತಿರುವುದರಿಂದ ದರ ಏರಿಕೆಗೆ ನಿರ್ಧಾರ ಮಾಡಲಾಗಿದೆ. ಈ ಕ್ರಮವು ಔಷಧೀಯ ಉದ್ಯಮಕ್ಕೆ ರಿಲೀಫ್ ಒದಗಿಸಲಿದೆ ಎಂದಿದ್ದಾರೆ.
“ಸದ್ಯಕ್ಕೆ 90 ದಿನಗಳಿಗೆ ಆಗುವಷ್ಟು ಔಷಧಗಳು ಮಾರುಕಟ್ಟೆಯಲ್ಲಿ ಇರುವ ಕಾರಣ, ಔಷಧಗಳ ಪರಿಷ್ಕೃತ ದರ ಜಾರಿಯಾಗಲು ಇನ್ನೂ ಎರಡು ಮೂರು ತಿಂಗಳು ಬೇಕಾಗಬಹುದು” ಎಂದೂ ಅವರು ಹೇಳಿದ್ದಾರೆ.
ಇನ್ನೊಂದೆಡೆ, ಔಷಧಗಳ ಬೆಲೆ ಏರಿಕೆಯ ಮಿತಿಯನ್ನೂ ದಾಟಿ ಫಾರ್ಮಾ ಕಂಪನಿಗಳು ಬೆಲೆ ಏರಿಕೆ ಮಾಡುತ್ತಿದ್ದು, ಔಷಧಗಳ ದರ ನಿಗದಿ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿವೆ ಎಂದು ಇತ್ತೀಚೆಗಿನ ರಾಸಾಯನಿಕ ಮತ್ತು ರಸಗೊಬ್ಬರಗಳಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಯನವು ಬಹಿರಂಗಪಡಿಸಿದೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.
ಔಷಧೀಯ ಔಷಧಿಗಳ ಬೆಲೆಗಳನ್ನು ನಿಗದಿಪಡಿಸುವ ಭಾರತದ ನಿಯಂತ್ರಕ ಸಂಸ್ಥೆಯಾದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು (ಎನ್ಪಿಪಿಎ) ಫಾರ್ಮಾ ಕಂಪನಿಗಳು ನಿಯಮ ಉಲ್ಲಂಘಿಸಿರುವ 307 ನಿದರ್ಶನಗಳನ್ನು ಪತ್ತೆಹಚ್ಚಿದೆ.
ಇದು ಔಷಧ (ಬೆಲೆ ನಿಯಂತ್ರಣ) ಆದೇಶ (ಡಿಪಿಸಿಒ), 2013ಕ್ಕೆ ಅನುಗುಣವಾಗಿ ಔಷಧಿಗಳಿಗೆ ಗರಿಷ್ಠ ಬೆಲೆಗಳನ್ನು ನಿಗದಿಪಡಿಸುತ್ತದೆ. ಎಲ್ಲಾ ತಯಾರಕರು ಮತ್ತು ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಎನ್ಪಿಪಿಎ ನಿಗದಿಪಡಿಸಿದ ಗರಿಷ್ಠ ಬೆಲೆಯಲ್ಲಿ (ಜೊತೆಗೆ ಅನ್ವಯವಾಗುವ ಸರಕು ಮತ್ತು ಸೇವಾ ತೆರಿಗೆ ಸೇರಿಸಿ) ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕು ಎಂದು ನಿಯಮ ಹೇಳುತ್ತದೆ.