ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿಗೆ (WCD Recruitment 2025) ಅರ್ಜಿ ಆಹ್ವಾನಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇರಿ ಒಟ್ಟು 2,500 ಹುದ್ದೆಗಳು ಖಾಲಿ ಇದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಏಪ್ರಿಲ್ 4 ಕೊನೆಯ ದಿನವಾಗಿದೆ.
ಯಾವ ಹುದ್ದೆಗಳು ಎಷ್ಟು ಖಾಲಿ?
1,500 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 1,000 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆಎ ದ್ವಿತೀಯ ಪಿಯುಸಿ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಪಾಸಾಗಿರಬೇಕು. ಸರ್ಕಾರದ ಅಂಗೀಕೃತ ಸಂಸ್ಥೆಯಿಂದ ಡಿಎಸ್ ಇಆರ್ ಟಿಯಿಂದ ಇಸಿಸಿಇ ಡಿಪ್ಲೊಮಾ ಕೋರ್ಸ್, ಜೆಒಸಿ ಕೋರ್ಸ್, ಎನ್ಟಿಟಿ ಕೋರ್ಸ್ ಅಥವಾ ಅಂಗನವಾಡಿ ಚಟುವಟಿಕೆಗೆ ಸಂಬಂಧಿಸಿದಂತೆ ಡಿಪ್ಲೊಮಾ ನ್ಯೂಟ್ರಿಷಿಯನ್, ಹೋಮ್ ಸೈನ್ಸ್ ಪ್ರಮಾಣ ಪತ್ರ, ನರ್ಸರಿ ಅಥವಾ ಪೂರ್ವ ಪ್ರಾಥಮಿಕ ತರಬೇತಿ ಪಡೆದ ಪ್ರಮಾಣ ಪತ್ರ ಹೊಂದಿದವರಿಗೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಆದ್ಯತೆ ನೀಡಲಾಗುತ್ತದೆ.
ವಯಸ್ಸಿನ ಮಿತಿ ಎಷ್ಟು?
ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ಆಗಿರಬೇಕು. 35 ವರ್ಷ ವಯಸ್ಸು ಮೀರಿರಬಾರದು. ಇತರೆ ಹಿಂದುಳಿದ ವರ್ಗದವರಿಗೆ 38 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು. ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ವಿದ್ಯಾರ್ಹತೆಯಲ್ಲಿ ಪಡೆದ ಅಂಕ ಹಾಗೂ ಬೋನಸ್ ಅಂಕಗಳನ್ನು ಒಳಗೊಂಡಂತೆ ಪಡೆದ ಒಟ್ಟು ಅಂಕ ಮತ್ತು ಮೆರಿಟ್ ಪಟ್ಟಿ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 10-15 ಸಾವಿರ ರೂ. ಸಂಭಾವನೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ವಿಳಾಸ: karnemakaone.kar.nicಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಂಗನವಾಡಿ ವರ್ಕರ್ ಹಾಗೂ ಹೆಲ್ಪರ್ ಹುದ್ದೆಗಳ ಪೈಕಿ ಒಂದನ್ನು ಆಯ್ಕೆ ಮಾಡಬೇಕು. ನಂತರ ಕಂಡುಬರುವ ಅರ್ಜಿಯನ್ನು ಭರ್ತಿ ಮಾಡಬೇಕು. ಜನನ ಪ್ರಮಾಣ ಪತ್ರ/ಜನ್ಮ ದಿನಾಂಕ ಇರುವ ಎಸ್ಎಸ್ಎಲ್ಸಿ ಅಂಕಪಟ್ಟಿ, ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ, ತಹಸೀಲ್ದಾರ್/ಉಪ ತಹಸೀಲ್ದಾರ್ ಬಳಿಯಿಂದ ಪಡೆದ 3 ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ ಸೇರಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಂತರದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್ ಲೋಡ್ ಮಾಡಿಟ್ಟುಕೊಳ್ಳಬೇಕು.