ನವದೆಹಲಿ: ದೇಶದ ಜನರಿಗೆ ಏಪ್ರಿಲ್ 1 ರೊಳಗಾಗಿ ಸಿಹಿಸುದ್ದಿ ನೀಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್(Toll Rate) ವಿಧಿಸುವುದಕ್ಕೆ ಸಂಬಂಧಿಸಿ ಹೊಸ ರಾಷ್ಟ್ರೀಯ ನೀತಿಯನ್ನು ಪರಿಚಯಿಸಲು ಸರ್ಕಾರ ಸಜ್ಜಾಗಿದ್ದು, ಏಪ್ರಿಲ್ 1ರೊಳಗೆ ಅದು ಘೋಷಣೆಯಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ 2025 ರಲ್ಲಿ ಮಾತನಾಡಿದ ಕೇಂದ್ರ ಸಚಿವರು, ಹೊಸ ಟೋಲ್ ನೀತಿ ಸಿದ್ಧವಾಗಿದೆ. ಏಪ್ರಿಲ್ 1 ರೊಳಗೆ ಘೋಷಿಸುವ ನಿರೀಕ್ಷೆಯಿದೆ. ಅದು ಜಾರಿಯಾದ ಬಳಿಕ ಯಾರೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರಗಳ ಬಗ್ಗೆ ಚಿಂತೆ ಮಾಡುವುದಾಗಲೀ, ದೂರುವುದಾಗಲೀ ಮಾಡುವುದಿಲ್ಲ. ಹೆದ್ದಾರಿ ಬಳಸುವ ಎಲ್ಲರ ಹೊರೆಯೂ ಇಳಿಕೆಯಾಗಲಿದೆ. ದೇಶದ ಜನರಿಗೆ ಭಾರೀ ರಿಯಾಯಿತಿ ಸಿಗಲಿದೆ ಎಂದು ಹೇಳಿದ್ದಾರೆ. ಆದರೆ, ಟೋಲ್ ಕುರಿತ ರಾಷ್ಟ್ರೀಯ ನೀತಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಅವರು ಹಂಚಿಕೊಂಡಿಲ್ಲ.
ಪ್ರಸ್ತುತ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ದ ಟೋಲ್ ಆದಾಯವು 55,000 ಕೋಟಿ ರೂ.ಗಳಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದು 1.40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. 2.80 ಲಕ್ಷ ಕೋಟಿ ರೂ.ಗಳ ಬಜೆಟ್ ಇದ್ದು, ನನ್ನ ಬಳಿ 5 ಲಕ್ಷ ಕೋಟಿ ರೂ.ಗಳ ಯೋಜನೆ ರೆಡಿ ಇದೆ ಎಂದೂ ಗಡ್ಕರಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಇತ್ತೀಚೆಗೆ ಮಾತನಾಡಿದ್ದ ಸಚಿವ ಗಡ್ಕರಿ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಬದಲಾಯಿಸಲು, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ರಸ್ತೆ ಬಳಕೆದಾರರಿಗೆ ಅನುಕೂಲವನ್ನು ಉತ್ತೇಜಿಸಲು ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದ್ದರು.
ಘರೋಂಡಾ, ಚೋರ್ಯಾಸಿ, ನೆಮಿಲಿ, ಯುಇಆರ್ -2 ಮತ್ತು ದ್ವಾರಕಾ ಎಕ್ಸ್ ಪ್ರೆಸ್ ವೇಯ ಟೋಲ್ ಪ್ಲಾಜಾಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್ ಪಿಆರ್) ಫಾಸ್ಟ್ ಟ್ಯಾಗ್ ಸಿಸ್ಟಮ್ ಆಧಾರಿತ ತಡೆರಹಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸಾರಿಗೆ ಸಚಿವಾಲಯವು ಪ್ರಸ್ತಾವನೆ ಕೋರಿಕೆಯನ್ನೂ ಆಹ್ವಾನಿಸಿದೆ. ಈ ಯೋಜನೆಯನ್ನು ಮೊದಲು ಪ್ರಾಯೋಗಿಕವಾಗಿ ಜಾರಿ ಮಾಡಿ, ಬಳಿಕ ಅದನ್ನು ಇತರೆ ಟೋಲ್ ಗಳಿಗೂ ಹಂತ ಹಂತವಾಗಿ ವಿಸ್ತರಿಸುವ ಚಿಂತನೆಯನ್ನು ಸರ್ಕಾರ ಹೊಂದಿದೆ.