ನವದೆಹಲಿ: ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೂಪೇಶ್ ಬಘೇಲ್ ಅವರನ್ನು ಒಂದೊಂದೇ ಹಗರಣಗಳು ಸುತ್ತಿಕೊಳ್ಳಲಾರಂಭಿಸಿವೆ. ಬುಧವಾರ ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ಬಘೇಲ್ ಅವರ ನಿವಾಸದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ.
ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆಯಬೇಕಿದ್ದ ಸಭೆಯಲ್ಲಿ ಭಾಗವಹಿಸಲೆಂದು ಭೂಪೇಶ್ ಬಘೇಲ್ ಅವರು ದಿಲ್ಲಿಗೆ ಹೊರಡುವ ಮುನ್ನವೇ ಕೇಂದ್ರ ತನಿಖಾ ತಂಡದ ಅಧಿಕಾರಿಗಳು ರಾಯ್ಪುರ ಮತ್ತು ಭಿಲಾಯ್ ನಲ್ಲಿರುವ ಬಘೇಲ್ ಅವರ ನಿವಾಸಕ್ಕೆ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದ್ದಾರೆ.
ಮಹದೇವ್ ಆಪ್ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ 70 ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಿ ಮಧ್ಯಪ್ರದೇಶ ಸರ್ಕಾರ ಕಳೆದ ವರ್ಷ ಆದೇಶ ನೀಡಿತ್ತು.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ, “ಈಗ ಸಿಬಿಐ ಬಂದಿದೆ. ಏಪ್ರಿಲ್ 8 ಮತ್ತು 9 ರಂದು ಅಹಮದಾಬಾದ್ (ಗುಜರಾತ್) ನಲ್ಲಿ ನಡೆಯಲಿರುವ ಎಐಸಿಸಿ ಸಭೆಗೆಂದು ರಚಿಸಲಾದ “ಕರಡು ಸಮಿತಿ”ಯ ಸಭೆಯಲ್ಲಿ ಭಾಗವಹಿಸಲು ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಇಂದು ದೆಹಲಿಗೆ ತೆರಳಬೇಕಿತ್ತು. ಅದಕ್ಕೂ ಮೊದಲೇ ಸಿಬಿಐ ರಾಯ್ಪುರ ಮತ್ತು ಭಿಲಾಯ್ ನಿವಾಸವನ್ನು ತಲುಪಿದೆ” ಎಂದು ಬರೆದುಕೊಂಡಿದ್ದಾರೆ. ಬಘೇಲ್ ವಿರುದ್ಧದ ಕ್ರಮವನ್ನು ಖಂಡಿಸಿರುವ ಅವರು, ಇದಕ್ಕೆಲ್ಲ ಕಾಂಗ್ರೆಸ್ ಆಗಲೀ, ಪಕ್ಷದ ಹಿರಿಯ ನಾಯಕರಾಗಲೀ ಹೆದರುವುದಿಲ್ಲ ಎಂದು ಹೇಳಿದ್ದಾರೆ.
“ಭೂಪೇಶ್ ಬಘೇಲ್ ಅವರು ಪಂಜಾಬ್ ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯಾದಾಗಿನಿಂದ ಬಿಜೆಪಿ ಭಯಭೀತವಾಗಿದೆ. ಮೊದಲಿಗೆ, ಜಾರಿ ನಿರ್ದೇಶನಾಲಯವನ್ನು ಅವರ ನಿವಾಸಕ್ಕೆ ಕಳುಹಿಸಲಾಯಿತು. ಈಗ ಸಿಬಿಐ ತಂಡವನ್ನು ಕಳುಹಿಸಲಾಗಿದೆ. ಇದು ಬಿಜೆಪಿಯ ಹತಾಶೆ ಮತ್ತು ಭಯವನ್ನು ತೋರಿಸುತ್ತದೆ. ಬಿಜೆಪಿ ರಾಜಕೀಯವಾಗಿ ಹೋರಾಡಲು ವಿಫಲವಾದಾಗ, ತನ್ನ ವಿರೋಧಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತದೆ” ಎಂದೂ ಶುಕ್ಲಾ ಆರೋಪಿಸಿದ್ದಾರೆ. ಅಲ್ಲದೆ ಬಿಜೆಪಿಯ “ದಮನಕಾರಿ” ರಾಜಕೀಯ ರಾಜ್ಯ ಮತ್ತು ದೇಶದ ಜನರಿಗೆ ತಿಳಿದಿದೆ ಎಂದೂ ಹೇಳಿದ್ದಾರೆ.
ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಹಗರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇಡಿ) ಇಲ್ಲಿಯವರೆಗೆ 2,295 ಕೋಟಿ ರೂ.ಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಮಾರ್ಚ್ 10 ರಂದು ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಪೇಶ್ ಬಘೇಲ್ ಅವರ ನಿವಾಸ ಮತ್ತು ಅವರ ಪುತ್ರ ಚೈತನ್ಯ ಬಘೇಲ್ ಅವರ ನಿವಾಸದಲ್ಲಿ ಶೋಧ ಸೇರಿದಂತೆ ದುರ್ಗ್ ಜಿಲ್ಲೆಯ 14 ಸ್ಥಳಗಳಲ್ಲಿ ಇಡಿ ಸರಣಿ ದಾಳಿಗಳನ್ನು ನಡೆಸಿತ್ತು.
ಈ ದಾಳಿಯ ಬಳಿಕ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದ ಬಘೇಲ್, ನನ್ನ ನಿವಾಸದಲ್ಲಿ ತನಿಖಾ ಸಂಸ್ಥೆಯು 33 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದೆ. ಆದರೆ, ಈ ಮೊತ್ತವು ಕೃಷಿ, ಹೈನುಗಾರಿಕೆ ಮತ್ತು ಕುಟುಂಬ ಉಳಿತಾಯದಿಂದ ಬಂದ ಆದಾಯ ಎಂದು ಹೇಳಿದ್ದರು.