ಬೆಂಗಳೂರು: ಬಿಬಿಎಂಪಿ ಕಚೇರಿ ಎದುರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಸದ ಲಾರಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಖಂಡ ತ್ಯಾಗರಾಜ್ ಮಾತನಾಡಿ, ಚಾಲಕರು, ಸಹಾಯಕರ ಕೆಲಸ ಖಾಯಂ ಮಾಡಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದೇವೆ. ನಾವು ಈ ಹಿಂದೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಡಿ. 2ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೇವು. ಡಿ. 3ರಂದು ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಬೆಳಗಾವಿ ಅಧಿವೇಶನ ಮುಗಿದ ನಂತರ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಬೆಳಗಾವಿ ಅಧಿವೇಶನ ಮುಗಿದು ನಾಲ್ಕು ತಿಂಗಳು ಕಳೆದಿವೆ. ಆದರೂ ನಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.
ಈಗ ಮತ್ತೆ ಹೋರಾಟ ಆರಂಭಿಸಿದ್ದೇವೆ. ನಾಳೆ ಬಿಬಿಎಂಪಿ ಬಜೆಟ್ ಇದೆ. ಈ ಬಜೆಟ್ ನಲ್ಲಿ ನಮ್ಮ ಚಾಲಕರನ್ನು ಖಾಯಂ ಮಾಡಿಕೊಳ್ಳುವುದು ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಪ್ರತಿ ನಿತ್ಯ ನಗರದ ಕಸ ತೆಗೆಯುವವರ ಕಷ್ಟಗಳನ್ನೇ ಬಿಬಿಎಂಪಿ ಕೇಳುತ್ತಿಲ್ಲ. ಚಾಲಕರಿಗೆ ಕೇವಲ 9 ಸಾವಿರ ಸಂಬಳ ನೀಡಲಾಗುತ್ತಿದೆ. ಈ ಕನಿಷ್ಠ ಸಂಬಳದಲ್ಲಿ ಬದುಕು ಸಾಗಿಸಲು ಆಗುವುದಿಲ್ಲ. ಕಳೆದ 4 ತಿಂಗಳಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ನಮ್ಮ ಕಷ್ಟ ಆಲಿಸುವ ಕಾರ್ಯ ಮಾಡುತ್ತಿಲ್ಲ. ಇಂದು ಸಂಜೆ ಒಳಗೆ ನಮ್ಮ ಬೇಡಿಕೆ ಕುರಿತು ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ, ನಾಳೆಯಿಂದ ಉಗ್ರ ಹೋರಾಟ ನಡೆಸುತ್ತೇವೆ. ಬೇಡಿಕೆ ಈಡೇರದಿದ್ದರೆ ನಾಳೆ ನಗರದಲ್ಲಿ 5,300 ವಾಹನ, 700 ಲಾರಿಗಳು ನಿಲ್ಲುತ್ತವೆ. ಕಸ ತೆಗೆಯುವುದಿಲ್ಲ ಎಂದು ಹೇಳಿದ್ದಾರೆ.