ನವದೆಹಲಿ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಮೊದಲೇ ಬಿಜೆಪಿ ಹಾಗೂ ಎಐಎಡಿಎಂಕೆ ಪಕ್ಷಗಳು ಮತ್ತೆ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಮೈತ್ರಿ ಕುರಿತ ಚರ್ಚೆಗಳು ಕಾವು ಪಡೆದುಕೊಂಡಿವೆ.
ಮಾಜಿ ಮುಖ್ಯಮಂತ್ರಿಯೂ ಆಗಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ದೆಹಲಿಯಲ್ಲಿ ಅಮಿತ್ ಶಾ ನಿವಾಸದಲ್ಲಿ ಮಾತುಕತೆ ನಡೆಸಿದರು. ತಮಿಳುನಾಡಿನಲ್ಲಿ ನಡೆಯುತ್ತಿರುವ ತ್ರಿಭಾಷಾ ಸೂತ್ರ ರಾಜಕೀಯ ಸೇರಿ ಹಲವು ವಿಷಯಗಳ ಕುರಿತು ಪಳನಿಸ್ವಾಮಿ ಅವರು ಅಮಿತ್ ಶಾ ಜತೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಕುರಿತು ಮಹತ್ವದ ಮಾತುಕತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
2023 ಮುರಿದುಬಿದ್ದಿದ್ದ ಮೈತ್ರಿ
ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ನಡುವಿನ ಮೈತ್ರಿಯು 2023ರ ಸೆಪ್ಟೆಂಬರ್ ನಲ್ಲಿ ಮುರಿದುಬಿದ್ದಿತ್ತು. 2024ರ ಲೋಕಸಭೆ ಚುನಾವಣೆಗೆ ಮೊದಲೇ ರಾಜ್ಯ ಬಿಜೆಪಿ ಹಾಗೂ ಎಐಎಡಿಎಂಕೆ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಮೈತ್ರಿ ಕಡಿದುಕೊಳ್ಳಲಾಗಿತ್ತು. ಅದರಲ್ಲೂ, ಎಐಎಡಿಎಂಕೆಯು ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಆಕ್ರಮಣಕಾರಿ ರಾಜಕೀಯ ನಿಲುವುಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಮೈತ್ರಿ ಮುರಿದುಕೊಂಡಿತ್ತು.
ಇದಾದ ಬಳಿಕ ಅಣ್ಣಾಮಲೈ ಅವರು ಎಐಎಡಿಎಂಕೆ ವಿರುದ್ಧ ಮೃದು ಧೋರಣೆ ತಳೆದಿದ್ದರು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವ ಕಾರಣ ಈಗ ಬಿಜೆಪಿ ಮತ್ತು ಎಐಎಡಿಎಂಕೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ ಎನ್ನಲಾಗಿದೆ. ತಮಿಳುನಾಡಿನ ಒಟ್ಟು 234 ಕ್ಷೇತ್ರಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಶತಾಯಗತಾಯ ಡಿಎಂಕೆಯನ್ನು ಸೋಲಿಸುವುದು ಬಿಜೆಪಿ ಹಾಗೂ ಎಐಎಡಿಎಂಕೆ ಗುರಿಯಾಗಿದೆ. ಇದೇ ಕಾರಣಕ್ಕಾಗಿ ಎರಡೂ ಪಕ್ಷಗಳು ಒಗ್ಗೂಡಲು ತೀರ್ಮಾನಿಸಿವೆ ಎನ್ನಲಾಗಿದೆ.