ಪಟನಾ: ಬಿಹಾರದ ಆರಾ ರೈಲು ನಿಲ್ದಾಣದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತಂದೆ ಹಾಗೂ 16 ವರ್ಷದ ಮಗಳ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ತಾನೂ ಗುಂಡು ಹಾರಿಸಿಕೊಂಡು ರೈಲು ನಿಲ್ದಾಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೀಕರ ಘಟನೆಯ ವೀಡಿಯೋಗಳು ಲಭ್ಯವಾಗಿದ್ದು, ಜಾಲತಾಣಗಳಲ್ಲಿ ಹರಿದಾಡಿವೆ.
ಆರಾ ರೈಲು ನಿಲ್ದಾಣದ ಎರಡು ಹಾಗೂ ಮೂರನೇ ಪ್ಲಾಟ್ ಫಾರಂ ಮಧ್ಯೆ ಸಂಪರ್ಕ ಕಲ್ಪಿಸುವ ಫುಟ್ ಬ್ರಿಡ್ಜ್ ಮೇಲೆ ಘಟನೆ ನಡೆದಿದೆ. 24 ವರ್ಷದ ಅಮನ್ ಕುಮಾರ್ ಎಂಬ ವ್ಯಕ್ತಿಯು ಗುಂಡಿನ ದಾಳಿ ನಡೆಸಿದ್ದಾನೆ. 16 ವರ್ಷದ ಜಿಯಾ ಕುಮಾರಿ ಹಾಗೂ ಆಕೆಯ ತಂದೆ ಅನಿಲ್ ಸಿನ್ಹಾ ಎಂಬುವರ ಮೇಲೆ ಅಮನ್ ಕುಮಾರ್ ಗುಂಡು ಹಾರಿಸಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಅಮನ್ ಕುಮಾರ್ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಕಾರಣ ಆತನ ಬಳಿ ಗನ್ ಇತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಿಯಾ ಕುಮಾರಿ ಹಾಗೂ ಅನಿಲ್ ಸಿನ್ಹಾ ಅವರು ರೈಲು ನಿಲ್ದಾಣಕ್ಕೆ ಆಗಮಿಸುತ್ತಲೇ ಅಮನ್ ಕುಮಾರ್ ಏಕೆ ಗುಂಡಿನ ದಾಳಿ ನಡೆಸಿದ? ಇವರ ನಡುವೆ ಏನಾದರೂ ಸಂಬಂಧ ಇದೆಯೇ ಎಂಬುದು ಸೇರಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಯಾ ಕುಮಾರಿ ಹಾಗೂ ಅನಿಲ್ ಸಿನ್ಹಾ ಅವರು ದೆಹಲಿಗೆ ತೆರಳಲು ರೈಲು ನಿಲ್ದಾಣಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಅಮನ್ ಕುಮಾರ್ ಭೋಜ್ ಪುರಿ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.