ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರವಾದದ ನಿರ್ಮೂಲನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. “ಕಳೆದ 10 ವರ್ಷಗಳಲ್ಲಿ ಜಮ್ಮು-ಕಾಶ್ಮಿರದಲ್ಲಿ ಉಗ್ರವಾದವನ್ನು ಮಟ್ಟಹಾಕಲಾಗಿದೆ. ಕಣಿವೆಯಲ್ಲಿ ಉಗ್ರರ ದಾಳಿಗೆ ನಾಗರಿಕರು, ಯೋಧರು ಮೃತಪಡುವ ಪ್ರಕರಣಗಳು ಶೇ.70ರಷ್ಟು ಕಡಿಮೆಯಾಗಿದೆ. ಉಗ್ರವಾದದ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.
ದೇಶದ ಭಧ್ರತೆ ಹಾಗೂ ಸುರಕ್ಷತೆ ಕುರಿತು ರಾಜ್ಯಸಭೆಯಲ್ಲಿ ಅಮಿತ್ ಶಾ ಮಾತನಾಡಿದರು. “ಜಮ್ಮು-ಕಾಶ್ಮಿರದಲ್ಲಿ ಉಗ್ರರ ಉಪಟಳವನ್ನು ನಿಗ್ರಹಿಸಲಾಗಿದೆ. 2004ರಿಂದ 2014ರ ಅವಧಿಯಲ್ಲಿ ಕಣಿವೆಯಲ್ಲಿ ಸುಮಾರು 7,217 ಉಗ್ರರ ದಾಳಿಗಳು ನಡೆದಿದ್ದವು. ಆದರೆ, 2014ರಿಂದ 2024ರ ಅವಧಿಯಲ್ಲಿ ಇದು 2,242ಕ್ಕೆ ಇಳಿಕೆಯಾಗಿದೆ. ಉಗ್ರರ ದಾಳಿಗೆ ಮೃತಪಡುವವರ ಸಂಖ್ಯೆಯೂ ಶೇ.70ರಷ್ಟು ಕುಸಿತವಾಗಿದೆ” ಎಂದು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
“2010ರಿಂದ 2014ರ ಅವಧಿಯಲ್ಲಿ ಪ್ರತಿ ವರ್ಷ ಸರಾಸರಿ 2,654 ಕಲ್ಲೆಸೆತದ ಪ್ರಕರಣಗಳು ನಡೆದಿದ್ದವು. ಆದರೆ, 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದ ಚಹರೆಯೇ ಬದಲಾಗಿದೆ. 2024ರಲ್ಲಿ ಒಂದೇ ಒಂದು ಕಲ್ಲೆಸೆತದ ಪ್ರಕರಣಗಳು ದಾಖಲಾಗಿಲ್ಲ. ಕಣಿವೆಯಲ್ಲಿ ಕಲ್ಲೆಸೆದವರನ್ನು ಮಟ್ಟಹಾಕಲಾಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಮುಂದೆಯೂ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ” ಎಂದು ಹೇಳಿದ್ದಾರೆ.
“ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಪೊಲೀಸರು ಸೇರಿ ಭದ್ರತಾ ಸಿಬ್ಬಂದಿಯ ಕೊಡುಗೆ ಜಾಸ್ತಿ ಇದೆ. 76 ವರ್ಷಗಳಲ್ಲಿ ಸಾವಿರಾರು ಯೋಧರು, ನಾಗರಿಕರು ಕಣಿವೆಯಲ್ಲಿ ಉಗ್ರರ ದಾಳಿಗೆ ಬಲಿಯಾದರು. ಆದರೀಗ, ಕಣಿವೆಯಲ್ಲಿ ಶಾಂತಿ ನೆಲೆಸುತ್ತಿದ್ದು, ಉಗ್ರರನ್ನು ನಿರ್ನಾಮ ಮಾಡಲು ಸಕಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಜತೆಗೆ ದೇಶದಲ್ಲಿ ಮಾವೋವಾದವನ್ನು ಕೂಡ ಒಂದು ವರ್ಷದೊಳಗೆ ನಿರ್ನಾಮ ಮಾಡಲಾಗುವುದು” ಎಂದು ಘೋಷಿಸಿದರು.