ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಡಿಜಿಲಾಕರ್ ನಲ್ಲಿ ನಾವು ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಆರ್ ಸಿ ಬುಕ್ ಸೇರಿ ಹಲವು ದಾಖಲೆಗಳನ್ನು ಸಂಗ್ರಹಿಸಿಡುತ್ತೇವೆ. ಹೀಗೆ ಸ್ಟೋರ್ ಮಾಡಿದ ದಾಖಲೆಗಳು ಮಾನ್ಯ ಎಂದು ಸರ್ಕಾರವೇ ತಿಳಿಸಿದೆ. ಡಿಜಿ ಲಾಕರ್ ನಲ್ಲಿ (DigiLocker) ಇನ್ನುಮುಂದೆ ಅಗತ್ಯ ದಾಖಲೆಗಳ ಜತೆಗೆ, ಡಿಮ್ಯಾಟ್ ಖಾತೆ, ಮ್ಯೂಚುವಲ್ ಫಂಡ್ ಹೂಡಿಕೆಗಳ ವಿವರಗಳನ್ನು ಸ್ಟೋರ್ ಮಾಡಬಹುದಾಗಿದೆ. ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ.
ಸೆಬಿ ಮಹತ್ವದ ಘೋಷಣೆ
ಡಿಮ್ಯಾಟ್ ಖಾತೆಗಳು, ಮ್ಯೂಚುವಲ್ ಫಂಡ್ಸ್, ಷೇರು ಮಾರುಕಟ್ಟೆಯ ಹೂಡಿಕೆಯ ಹೂಲ್ಡಿಂಗ್ಸ್ ಗಳನ್ನು ಸ್ಟೋರ್ ಮಾಡುವ ದಿಸೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಯು ಮಹತ್ವದ ಘೋಷಣೆ ಮಾಡಿದೆ. ಡಿಜಿ ಲಾಕರ್ ಸಹಯೋಗದೊಂದಿಗೆ ಹೂಡಿಕೆಯ ದಾಖಲೆಗಳನ್ನೂ ಡಿಜಿ ಲಾಕರ್ ನಲ್ಲಿ ಸ್ಟೋರ್ ಮಾಡಲು ತೀರ್ಮಾನಿಸಲಾಗಿದೆ ಎಂಬುದಾಗಿ ಸೆಬಿ ಘೋಷಣೆ ಮಾಡಿದೆ. ಇದರಿಂದ ಹೂಡಿಕೆದಾರರಿಗೆ ಭಾರಿ ಅನುಕೂಲವಾಗಲಿದೆ.
ಡಿಜಿ ಲಾಕರ್ ನಲ್ಲಿ ಈಗಾಗಲೇ ಹೂಡಿಕೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಸ್ಟೋರ್ ಮಾಡುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬ್ಯಾಂಕ್ ಖಾತೆಗಳು, ವಿಮಾ ದಾಖಲೆಗಳು, ನ್ಯಾಷನಲ್ ಪೆನ್ಶನ್ ಸ್ಕೀಮ್ ಸ್ಟೇಟ್ ಮೆಂಟ್ ಗಳನ್ನು ಸ್ಟೋರ್ ಮಾಡಬಹುದಾಗಿದೆ. ಆದರೆ, ಏಪ್ರಿಲ್ 1ರಿಂದ ಡಿಜಿ ಲಾಕರ್ ನಲ್ಲಿ ಡಿಮ್ಯಾಟ್ ಖಾತೆಗಳು, ಮ್ಯೂಚುವಲ್ ಫಂಡ್ ಹೂಡಿಕೆಗಳ ದಾಖಲೆಗಳು ಕೂಡ ಫೆಚ್ (Fetch) ಆಗಲಿವೆ ಎಂದು ಸೆಬಿ ಘೋಷಣೆ ಮಾಡಿದೆ.
ಸೆಬಿಯ ಹೊಸ ಸಹಯೋಗದಿಂದಾಗಿ ಹೂಡಿಕೆದಾರರು ಹಣಕಾಸು, ಹೂಡಿಕೆ, ಷೇರುಗಳ ಕುರಿತಾದ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಸಂಗ್ರಹಿಸಬಹುದಾಗಿದೆ. ಇವು ಸುರಕ್ಷಿತವೂ ಆಗಿರುವುದರಿಂದ ಹೂಡಿಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲವಾಗಲಿದೆ. ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿಗಳು, ರಿಜಿಸ್ಟ್ರಾರ್ ಗಳು ಮತ್ತು ಟ್ರಾನ್ಸ್ ಫರ್ ಏಜೆಂಟ್ ಗಳಿಗೆ ಸೆಬಿಯು ಈಗಾಗಲೇ ಹಲವು ನಿರ್ದೇಶನ ನೀಡಿದೆ. ಡಿಜಿ ಲಾಕರ್ ಗೆ ನೋಂದಣಿ ಮಾಡಿಕೊಳ್ಳಿ ಎಂಬುದಾಗಿಯೂ ಸೂಚಿಸಿದೆ.
ಡಿಜಿಲಾಕರ್ ಏಕೆ ಅನುಕೂಲಕರ?
ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿಗಳು ಡಿಜಿಲಾಕರ್ ಗೆ ನೋಂದಣಿ ಮಾಡಿಕೊಂಡರೆ, ಹೂಡಿಕೆದಾರರು ಫೆಚ್ ಮಾಡಲು ಸುಲಭವಾಗುತ್ತದೆ. ಡಿಜಿಲಾಕರ್ ಗೆ ದಾಖಲೆಗಳನ್ನು ಸ್ಟೋರ್ ಮಾಡುವ ಜತೆಗೆ, ಈ ದಾಖಲೆಗಳ ಆ್ಯಕ್ಸೆಸ್ ಯಾರಿಗೆ ನೀಡಬೇಕು? ಆ್ಯಕ್ಸೆಸ್ ನಾಮಿನಿ ಯಾರು ಎಂಬುದನ್ನು ನೇಮಿಸಲು ಕೂಡ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ, ಡಿಜಿಲಾಕರ್ ನಲ್ಲಿ ದಾಖಲೆ ಸಂಗ್ರಹಿಸಿದ ವ್ಯಕ್ತಿಯು ಹಠಾತ್ ನಿಧನರಾದರೆ, ಅವರ ನಾಮಿನಿಗಳಿಗೆ ದಾಖಲೆಗಳು ಸಿಗುತ್ತವೆ.