ದಾವಣಗೆರೆ: ಕಳೆದ 2 ತಿಂಗಳುಗಳಿಂದ ಜನರ ನಿದ್ದೆಗೆಡಿಸಿದ್ದ ಕರಡಿ ಕೊನೆಗೂ ಸೆರೆಯಾಗಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಕರಡಿಯಿಂದಾಗಿ ಜನರು ಬೆಚ್ಚಿ ಬಿದ್ದಿದ್ದರು. ಕಣ್ಣಿಗೆ ಬಿದ್ದು ಕರಡಿ ಮತ್ತೆ ಮಾಯವಾಗುತ್ತಿತ್ತು. ಇದರಿಂದಾಗಿ ಜನರು ಓಡಾಡಲು ಕೂಡ ಭಯ ಬೀಳುವಂತಾಗಿತ್ತು.
ಈ ಕರಡಿ ಮರವಂಜಿ ಗ್ರಾಮದ ಈಶ್ವರ ದೇವಸ್ಥಾನದ ಬಳಿ ಆಗಾಗ ಕಾಣಿಸಿಕೊಳ್ಳುತಿತ್ತು. ಈ ವೇಳೆ ಗ್ರಾಮದ ಜನ ಕರಡಿ ಕಂಡು ಭಯಭೀತರಾಗಿದ್ದರು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗಾಗಿ ಬಲೆ ಬೀಸಿದ್ದರು.
ಶುಕ್ರವಾರ ರಾತ್ರಿ ಕರಡಿ ಈಶ್ವರ ದೇವಸ್ಥಾನದ ಒಳಗೆ ಹೋಗಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಬಾಗಿಲು ಹಾಕಿದ್ದಾರೆ. ಆನಂತರ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಬೋನ್ ಗೆ ಕರಡಿ ಬೀಳುವಂತೆ ಮಾಡಿ, ತೆಗೆದುಕೊಂಡು ಹೋಗಿದ್ದಾರೆ. ಈಗ ಮರವಂಜಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.