ನವದೆಹಲಿ: ವಿಶ್ವದಲ್ಲೇ ಅತಿ ಹೆಚ್ಚು ಸಂತಸದಾಯಕ ದೇಶಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಫಿನ್ಲೆಂಡ್ ಈ ಬಾರಿಯೂ ಅಗ್ರ ಸ್ಥಾನ ಪಡೆದಿದೆ. ಆ ಮೂಲಕ ಸತತ ಎಂಟನೇ ಬಾರಿಗೆ ಸಂತಸದಾಯಕ (Happiest Country) ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಂತಾಗಿದೆ. ಇನ್ನು, 140 ದೇಶಗಳ ಪಟ್ಟಿಯಲ್ಲಿ ಭಾರತವು 118ನೇ ಸ್ಥಾನ ಪಡೆದಿದೆ. ಕಳೆದ ವರ್ಷ 126ನೇ ಸ್ಥಾನ ಪಡೆದಿದ್ದ ಭಾರತವು ಈ ಬಾರಿ 8 ಸ್ಥಾನ ಮೇಲೇರಿದೆ.
ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ 2025 ಬಿಡುಗಡೆ ಮಾಡಿದೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಖುಷಿಯ ದಿನದ ಹಿನ್ನೆಲೆಯಲ್ಲಿ ವರದಿ ಬಿಡುಗಡೆ ಮಾಡಲಾಗಿದೆ. ಸುಮಾರು 140 ದೇಶಗಳ ಜನರ ಅಭಿಪ್ರಾಯ ಸಂಗ್ರಹಿಸಿ, ಅಲ್ಲಿನ ಮೂಲ ಸೌಕರ್ಯಗಳು ಸೇರಿ ಹಲವು ಅಂಶಗಳನ್ನು ಗಮನಿಸಿ ವರದಿ ತಯಾರಿಸಲಾಗುತ್ತದೆ. ಒಂದು ದೇಶದ ಜಿಡಿಪಿ, ಭ್ರಷ್ಟಾಚಾರ ಪ್ರಮಾಣ, ಸಾಮಾಜಿಕ ಸಹಕಾರ, ಆರೋಗ್ಯ, ಸ್ವಾತಂತ್ರ್ಯ ಸೇರಿ ಹಲವು ವಿಷಯಗಳನ್ನು ಪರಿಗಣಿಸಿ ವರದಿ ತಯಾರಿಸಲಾಗುತ್ತದೆ.
ಹಾಗೆ ನೋಡಿದರೆ ಪ್ರತಿ ವರ್ಷವೂ ಫಿನ್ಲೆಂಡ್ ಮೊದಲ ಸ್ಥಾನ ಪಡೆಯುತ್ತದೆ. ಸತತ ಎಂಟನೇ ಬಾರಿಗೆ ಮೊದಲ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 10 ಅಂಕಗಳಿಗೆ ಆಯಾ ದೇಶಗಳು ಪಡೆಯುವ ಅಂಕಗಳನ್ನು ಆಧರಿಸಿ ಅಗ್ರ ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ. ಫಿನ್ಲೆಂಡ್ ಈ ಬಾರಿ 7.74 ಅಂಕ ಪಡೆದಿದೆ. ಈ ಬಾರಿ ಅಫಘಾನಿಸ್ತಾನವು ಕೊನೆಯ ಸ್ಥಾನ ಪಡೆದಿದೆ.
ನಮ್ಮ ನೆರೆಯ ದೇಶಗಳಾದ ನೇಪಾಳ 92, ಪಾಕಿಸ್ತಾನ 109, ಚೀನಾ 68, ಶ್ರೀಲಂಕಾ 133 ಹಾಗೂ ಬಾಂಗ್ಲಾದೇಶ 134ನೇ ಸ್ಥಾನ ಪಡೆದಿವೆ. ಅಫಘಾನಿಸ್ತಾನದ ನಂತರ ಸಿಯೆರಾ ಲಿಯೋನ್ ಹಾಗೂ ಲೆಬನಾನ್ ದೇಶಗಳಿವೆ.
ಟಾಪ್ 10 ಖುಷಿಯ ದೇಶಗಳು
ಫಿನ್ಲೆಂಡ್
ಡೆನ್ಮಾರ್ಕ್
ಐಸ್ ಲ್ಯಾಂಡ್
ಸ್ವೀಡನ್
ನೆದರ್ಲೆಂಡ್ಸ್
ಕಾಸ್ಟಾ ರಿಕಾ
ನಾರ್ವೆ
ಇಸ್ರೇಲ್
ಲಕ್ಸೆಮ್ ಬರ್ಗ್
ಮೆಕ್ಸಿಕೊ