ಬೆಂಗಳೂರು: ಭುವನಂ ಗಗನಂ ಚಿತ್ರ ತಂಡದ 25 ದಿನಗಳ ಸಂಭ್ರಮಾಚರಣೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಭಾಗವಹಿಸಿದ್ದಾರೆ.
ರತ್ನನ್ ಪ್ರಪಂಚ ಸಿನಿಮಾ ಖ್ಯಾತಿಯ ಪ್ರಮೋದ್ ಹಾಗೂ ದಿಯಾ ಖ್ಯಾತಿ ಪೃಥ್ವಿ ಅಂಬರ್ ನಟನೆಯ ಭುವನಂ ಗಗನಂ ಚಿತ್ರ 25 ದಿನ ಪೂರೈಸಿದೆ. ಪ್ರೇಮಿಗಳ ದಿನದಂದು ತೆರೆಕಂಡ ಈ ಸಿನಿಮಾಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ಇತ್ತೀಚೆಗಷ್ಟೇ ಚಿತ್ರ ತಂಡದಿಂದ ಸಂಭ್ರಮಾಚರಣೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಆಗಮಿಸಿದ್ದರು. ನಿರ್ದೇಶಕ ಸಿಂಪಲ್ ಸುನಿ, ಚೇತನ್ ಕುಮಾರ್, ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ಸಿನಿಮಾ ಇಂಡಸ್ಟ್ರೀಯಲ್ಲಿ ಸದ್ಯಕ್ಕೆ ನಗುನೇ ಇಲ್ಲ. ಆದರೆ ಇಲ್ಲಿ ನಗುತ್ತಿದ್ದೇವೆ. ಆ ನಗು ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಜನ ಥಿಯೇಟರ್ ಗೆ ಬರುತ್ತಿಲ್ಲ ಅಂತಿದ್ದಾರೆ. ಸಿನಿಮಾ ಚೆನ್ನಾಗಿದೆ ಎಂದರೆ ಜನ ಥಿಯೇಟರ್ ಒಳಗೆ ಬರುತ್ತಾರೆ. ಆ ಮುಖ ಬೇಕು, ಈ ಬೇಕು ಅನ್ನೋದು ಏನೂ ಬೇಡ. ಚೆನ್ನಾಗಿದ್ದರೆ ನುಗುತ್ತಾರೆ ಎನ್ನುವುದಕ್ಕೆ ಪ್ರೇಮಲೋಕನೇ ಸಾಕ್ಷಿ ಎಂದಿದ್ದಾರೆ.
ಈ ಚಿತ್ರದಲ್ಲಿ ರೆಚೆಲ್ ಡೇವಿಡ್ ಮತ್ತು ಅಶ್ವಥಿ ನಾಯಕಿಯರಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗಿರೀಶ್ ಮೂಲಿಮನಿ ನಿರ್ದೇಶನ ಮಾಡಿದ್ದು ಎಂ. ಮುನೇಗೌಡ ನಿರ್ಮಾಣ ಮಾಡಿದ್ದಾರೆ.