ಬೆಂಗಳೂರು: 2024-25ನೇ ಸಾಲಿನ ಹಣಕಾಸು ವರ್ಷ ಮುಗಿಯುತ್ತಿದೆ. ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಅದರಲ್ಲೂ, ಕೆಲ ದಿನಗಳ ಹಿಂದಷ್ಟೇ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಟಿಡಿಎಸ್ ಉಳಿತಾಯಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಅದರಂತೆ, ಏಪ್ರಿಲ್ 1ರಿಂದ ಹೊಸ ಟಿಡಿಎಸ್ ನಿಯಮಗಳು ಜಾರಿಯಾಗಲಿವೆ. ಯಾವೆಲ್ಲ ಹೊಸ ನಿಯಮಗಳು ಜಾರಿಯಾಗಲಿವೆ? ಟಿಡಿಎಸ್ ಉಳಿತಾಯ ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
• ಹಿರಿಯ ನಾಗರಿಕರಿಗೆ ಟಿಡಿಎಸ್ ಉಳಿತಾಯ
ಬ್ಯಾಂಕ್ ಗಳಲ್ಲಿ ಎಫ್ ಡಿ, ಆರ್ ಡಿ ಸೇರಿ ಹಲವು ಉಳಿತಾಯ ಯೋಜನೆಗಳ ಮೂಲಕ ಬಡ್ಡಿಯ ಲಾಭ ಪಡೆಯುವ ಹಿರಿಯ ನಾಗರಿಕರಿಗೆ ಏಪ್ರಿಲ್ 1ರಿಂದ ಟಿಡಿಎಸ್ ಉಳಿತಾಯವಾಗಲಿದೆ. ಬಡ್ಡಿ ಗಳಿಕೆ ಮೇಲಿನ ಟಿಡಿಎಸ್ ವಿನಾಯಿತಿ ಮಿತಿಯನ್ನು ಕೇಂದ್ರ ಸರ್ಕಾರವು 1 ಲಕ್ಷ ರೂ.ಗೆ ಏರಿಕೆ ಮಾಡಿದೆ. ಹಾಗಾಗಿ, ಹಿರಿಯ ನಾಗರಿಕರು ಒಂದು ಲಕ್ಷ ರೂ.ವರೆಗಿನ ಬಡ್ಡಿ ಗಳಿಕೆಗೆ ಟಿಡಿಎಸ್ ಕಟ್ಟಬೇಕಿಲ್ಲ.
• ಸಾಮಾನ್ಯ ನಾಗರಿಕರಿಗೂ ಉಳಿತಾಯ
ಹಿರಿಯ ನಾಗರಿಕರಲ್ಲದ ಸಾಮಾನ್ಯ ಜನರಿಗೂ ಏಪ್ರಿಲ್ 1ರಿಂದ ಟಿಡಿಎಸ್ ಉಳಿತಾಯವಾಗಲಿದೆ. ಎಫ್ ಡಿ ಸೇರಿ ಯಾವುದೇ ಉಳಿತಾಯ ಯೋಜನೆಗಳ ಮೂಲಕ ಗಳಿಸುವ ಬಡ್ಡಿ ಆದಾಯಕ್ಕೆ ಇದ್ದ ಟಿಡಿಎಸ್ ಮಿತಿಯನ್ನು 40 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಏರಿಕೆ ಮಾಡಿರುವ ಕಾರಣ ಟಿಡಿಎಸ್ ಉಳಿತಾಯ ಮಾಡಬಹುದಾಗಿದೆ.
• ಕಮಿಷನ್ ಆದಾಯಕ್ಕೆ ಟಿಡಿಎಸ್ ಮಿತಿ
ಕಳೆದ ಇನ್ಶೂರೆನ್ಸ್ ಮತ್ತು ಬ್ರೋಕರೇಜ್ ಮೇಲಿನ ಕಮಿಷನ್ ಆದಾಯಕ್ಕೆ ಟಿಡಿಎಸ್ ಮಿತಿಯನ್ನು ವಿಸ್ತರಿಸಲಾಗಿದೆ. ವಿಮಾ ಏಜೆಂಟ್ ಗಳಿಗೆ ಇದುವರೆಗೆ 15 ಸಾವಿರ ರೂ. ಇದ್ದ ಟಿಡಿಎಸ್ ವಿನಾಯಿತಿ ಮಿತಿಯನ್ನು 20 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ.
• ಮ್ಯೂಚುವಲ್ ಫಂಡ್ ಆದಾಯಕ್ಕೆ ಟಿಡಿಎಸ್ ಮಿತಿ ಏರಿಕೆ
ಮ್ಯೂಚುವಲ್ ಫಂಡ್ ಗಳು ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಲಾಭಾಂಶ ಮತ್ತು ಆದಾಯದ ಮೇಲೆ ಟಿಡಿಎಸ್ ಮಿತಿಯನ್ನು 5 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಪ್ರಯೋಜನ ನೀಡುತ್ತದೆ. ಮ್ಯೂಚುವಲ್ ಫಂಡ್ ಗಳು ಮತ್ತು ಷೇರುಗಳಿಂದ ಬರುವ ಆದಾಯ 10 ಸಾವಿರ ರೂ. ಮೀರಿದರೆ ಮಾತ್ರ ಟಿಡಿಎಸ್ ಅನ್ವಯವಾಗುತ್ತದೆ.