ನವದೆಹಲಿ: ಭಗವದ್ಗೀತೆಯ ಕೃಷ್ಣನ ಬೋಧನೆಗಳು ಜಗತ್ತಿನಾದ್ಯಂತ ಕೋಟ್ಯಂತರ ಜನರ ಜೀವನವನ್ನು ಬದಲಿಸಿವೆ. ಹಾಗಾಗಿ, ಜಾತಿ-ಧರ್ಮವೆನ್ನದೆ, ಗಣ್ಯರು ಕೂಡ ಭಗವದ್ಗೀತೆಯನ್ನು ಓದುತ್ತಾರೆ. ಕೃಷ್ಣನ ಸಂದೇಶಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಅಮೆರಿಕದ ಗುಪ್ತಚರ ಇಲಾಖೆ ನಿರ್ದೇಶಕಿಯಾಗಿರುವ ತುಳಸಿ ಗಬ್ಬಾರ್ಡ್ ಅವರು ಭಗವದ್ಗೀತೆಯ ಕುರಿತು ಮಾತನಾಡಿದ್ದಾರೆ. “ಸಂಷ್ಟಕದ ಸಂದರ್ಭಗಳಲ್ಲಿ ನನಗೆ ಕೃಷ್ಣನ ಬೋಧನೆಗಳೇ ಆಸರೆ” ಎಂದು ಹೇಳಿದ್ದಾರೆ.
ಭಾರತ ಪ್ರವಾಸದಲ್ಲಿರುವ ತುಳಸಿ ಗಬ್ಬಾರ್ಡ್ ಅವರು ಎಎನ್ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ್ದಾರೆ. ಇದೇ ವೇಳೆ ಅವರು, “‘ಸವಾಲಿನ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನೀಡಿರುವ ಬೋಧನೆಗಳು ನನಗೆ ಶಕ್ತಿ ಮತ್ತು ಮಾರ್ಗದರ್ಶನ ನೀಡುತ್ತವೆ” ಎಂದು ತಿಳಿಸಿದ್ದಾರೆ.
ಯುದ್ಧದ ಸನ್ನಿವೇಶ, ಸಂಘರ್ಷ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡುವ ವೇಳೆ ಎದುರಾದ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಲು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪ್ರತಿಪಾದಿಸಿದ ಉಪದೇಶಗಳು ಸಹಾಯಕ್ಕೆ ಬಂದಿದ್ದವು. ಕೆಟ್ಟ ಸನ್ನಿವೇಶ ಎದುರಾದಾಗ, ಪರಿಸ್ಥಿತಿ ತೀರಾ ಬಿಗಡಾಯಿಸಿದ ವೇಳೆ ಶ್ರೀಕೃಷ್ಣ ಯುದ್ಧ ಭೂಮಿಯಿಂದ ವಿಮುಖವಾಗುತ್ತಿದ್ದ ಅರ್ಜುನನಿಗೆ ಬೋಧಿಸಿದ ಉಪದೇಶಗಳು ಶಕ್ತಿ, ಶಾಂತಿ ಹಾಗೂ ಚೈತನ್ಯ ನೀಡಿದ್ದವು” ಎಂದು ಹೇಳಿದ್ದಾರೆ.
ಭಾರತದ ಮೇಲೆ ಪ್ರೀತಿ ಇದೆ ಎಂದು ಕೂಟ ತುಳಸಿ ಗಬ್ಬಾರ್ಡ್ ಮನದ ಮಾತು ಬಿಚ್ಚಿಟ್ಟಿದ್ದಾರೆ. “ಭಾರತದ ಮೇಲೆ ಅತೀವ ಪ್ರೀತಿ ಇದೆ. ಇಲ್ಲಿರುವಾಗ ನನ್ನ ಮನೆಯಲ್ಲಿರುವ ಅನುಭವವಾಗುತ್ತದೆ. ಜನರ ಆತ್ಮೀಯತೆ, ಇಲ್ಲಿನ ಆಹಾರ ತುಂಬ ಇಷ್ಟವಾಗುತ್ತದೆ. ದಾಲ್, ಮಖಾನಿ, ಪನ್ನೀರ್ ಖಾದ್ಯಗಳು ಬಲು ಇಷ್ಟ” ಎಂದು ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತುಳಸಿ ಗಬ್ಬಾರ್ಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿದ್ದು, ಪ್ರಧಾನಿಯು ಇವರಿಗೆ ಪ್ರಯಾಗರಾಜ್ ಮಹಾಕುಂಭಮೇಳದ ಗಂಗಾಜಲ ನೀಡಿದ್ದಾರೆ.