ಲಖನೌ: ಜಗತ್ತು ಈಗ ಕೃತಕ ಬುದ್ಧಿಮತ್ತೆ ಲೋಕಕ್ಕೆ ಕಾಲಿಟ್ಟಿದೆ. ತಂತ್ರಜ್ಞಾನ ಮನುಷ್ಯನ ಅಂದಾಜು-ನಿರೀಕ್ಷೆಗಳನ್ನೂ ಮೀರಿ ಬೆಳೆದಿದೆ. ಆದರೆ, ಈಗಲೂ ಮನುಷ್ಯನ ಮನಸ್ಸಲ್ಲಿ ಜಾತಿಯ ವಿಷಬೀಜ ಮಾತ್ರ ನಿರ್ನಾಮವಾಗಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ ಮಗಳ ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿದಳು ಎಂದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ.
ಹೌದು, ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಅನಿಲ್ ಶರ್ಮಾ (45) ಎಂಬ ವ್ಯಕ್ತಿಯು ತನ್ನ ಪತ್ನಿಯ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಹತ್ಯೆಗೀಡಾದ ಮಹಿಳೆಯನ್ನು ರೇಣು ಶರ್ಮಾ ಎಂದು ಗುರುತಿಸಲಾಗಿದೆ. ಮಗಳ ಮದುವೆ ಸಂಬಂಧ ಮಾತನಾಡೋಣ ಬಾ ಎಂದು ಮನೆಯ ಹಿಂದಿನ ಮೈದಾನಕ್ಕೆ ಪತ್ನಿಯನ್ನು ಅನಿಲ್ ಶರ್ಮಾ ಕರೆದಿದ್ದಾನೆ. ಅಲ್ಲಿಯ ಪತ್ನಿಯ ಜತೆ ವಾಗ್ವಾದ ನಡೆಸಿದ ಆತ, ಕೋಪದಲ್ಲಿ ಕತ್ತುಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಡೆದಿದ್ದೇನು?
ಅನಿಲ್ ಶರ್ಮಾ ಹಾಗೂ ರೇಣು ಶರ್ಮಾ ದಂಪತಿಯ ಪುತ್ರಿಯು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗುತ್ತೇನೆ ಎಂದು ಯುವತಿಯು ತಂದೆ-ತಾಯಿಗೆ ಕಳೆದ ಜನವರಿಯಲ್ಲಿ ತಿಳಿಸಿದ್ದಳು. ಇದಕ್ಕೆ ರೇಣು ಶರ್ಮಾ ಒಪ್ಪಿದ್ದಾರೆ. ಮಗಳು ಖುಷಿಯಿಂದ ಇರುತ್ತಾಳೆ ಎಂದರೆ ಜಾತಿ ಯಾವುದಾದರೇನು ಎಂದಿದ್ದಾರೆ. ಆದರೆ, ಅನಿಲ್ ಶರ್ಮಾ ಇದಕ್ಕೆ ವಿರೋಧಿಸಿದ್ದಾನೆ.
ಅಪ್ಪನ ವಿರೋಧದ ಮಧ್ಯೆಯೂ ಯುವತಿಯು ಕಳೆದ ಫೆಬ್ರವರಿಯಲ್ಲಿ ತಾನು ಇಷ್ಟಪಟ್ಟ ಯುವಕನ ಜತೆ ಹಸೆಮಣೆ ಏರಿದ್ದಾಳೆ. ರೇಣು ಶರ್ಮಾ ಅವರು ಮುಂದೆ ನಿಂತು ಮಗಳ ಮದುವೆ ಮಾಡಿಸಿದ್ದಾರೆ. ಆದರೆ, ಮಗಳು, ಹೆಂಡತಿ ಮೇಲಿನ ಕೋಪದಿಂದ ಅನಿಲ್ ಶರ್ಮಾ ಮದುವೆಗೆ ಹಾಜರಾಗಿಲ್ಲ. ಅಲ್ಲದೆ, ಮಗಳ ಮದುವೆಗೆ ಬೆಂಬಲ ನೀಡಿದ್ದಕ್ಕಾಗಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.