ಬೆಂಗಳೂರು: ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಮ್ಯೂಚುವಲ್ ಫಂಡ್ ಎಸ್ಐಪಿ ಬಗ್ಗೆ ನಮಗೆ ಗೊತ್ತಿಲ್ಲ. ಅವುಗಳ ಮೇಲೆ ನಮಗೆ ನಂಬಿಕೆಯೂ ಇಲ್ಲ. ಹಾಗಾಗಿ, ಗ್ಯಾರಂಟಿ ಇರುವ ಬ್ಯಾಂಕ್ ಎಫ್ ಡಿ ಮಾಡಿಸುತ್ತೇವೆ ಎಂದು ತುಂಬ ಜನ ಅಂದುಕೊಂಡಿರುತ್ತಾರೆ. ಆದರೆ, ಬ್ಯಾಂಕುಗಳು ದಿವಾಳಿಯಾದರೆ, ಕಳ್ಳರು ಇಡೀ ಬ್ಯಾಂಕ್ ನಲ್ಲಿರುವ ಹಣವನ್ನು ಲಪಟಾಯಿಸಿದರೆ, ಎಫ್ ಡಿ ಹಣಕ್ಕೂ ಸುರಕ್ಷತೆ ಇರುವುದಿಲ್ಲ ಎಂಬುದು ತುಂಬ ಜನರಿಗೆ ಗೊತ್ತಿರಲಿಕ್ಕಿಲ್ಲ.
ಹೌದು, ನಾವು ಬ್ಯಾಂಕಿನಲ್ಲಿ ಇರಿಸುವ ಉಳಿತಾಯ ಠೇವಣಿ, ಎಫ್ ಡಿಗೆ ನಿಗದಿತ ಮೊತ್ತಕ್ಕೆ ಮಾತ್ರ ವಿಮಾ ಸುರಕ್ಷತೆ ಇರುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತವು ತುರ್ತು ಸಂದರ್ಭಗಳಲ್ಲಿ ಗ್ರಾಹಕರಿಗೆ ಸಿಗುವುದಿಲ್ಲ ಎಂಬುದು ಗೊತ್ತಿರಬೇಕು. ಹೌದು, ಡೆಪಾಸಿಟ್ ಇನ್ಶೂರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಸಂಸ್ಥೆಯು ಬ್ಯಾಂಕುಗಳಲ್ಲಿ ಗ್ರಾಹಕರು ಇರಿಸುವ ಠೇವಣಿಗೆ 5 ಲಕ್ಷ ರೂ.ವರೆಗೆ ಮಾತ್ರ ಖಾತ್ರಿ ಇರುತ್ತದೆ.
ಬ್ಯಾಂಕುಗಳು ದಿವಾಳಿಯಾದರೆ, ಕಳ್ಳತನಕ್ಕೆ ಸಿಲುಕಿ ನಲುಗಿದರೆ, ಡಿಐಸಿಜಿಸಿ ಮೂಲಕ ಗ್ರಾಹಕರಿಗೆ 5 ಲಕ್ಷ ರೂ. ಮಾತ್ರ ಸಿಗುತ್ತದೆ. ದೇಶದ ರಾಷ್ಟ್ರೀಕೃತ ಬ್ಯಾಂಕುಗಳಿಂದ ಹಿಡಿದು, ಸಣ್ಣ ಪುಟ್ಟ ಬ್ಯಾಂಕುಗಳಿಗೂ ಇದೇ ನಿಯಮಗಳು ಅನ್ವಯವಾಗುತ್ತವೆ.
ಕೆಲ ದಿನಗಳ ಹಿಂದಷ್ಟೇ ಇಂಡಸ್ ಇಂಡ್ ಬ್ಯಾಂಕಿನ ಷೇರುಗಳು ಕುಸಿತವಾಗಿ, ಬ್ಯಾಂಕಿಗೆ 2,100 ಕೋಟಿ ರೂ. ನಷ್ಟವಾಯಿತು ಎಂದು ತಿಳಿದುಬಂದಿದೆ. ಇದೇ ರೀತಿಯಲ್ಲಿ ಬ್ಯಾಂಕ್ ದಿವಾಳಿಯಾದರೆ, ಗ್ರಾಹಕರಿಗೆ 5 ಲಕ್ಷ ರೂ.ವರೆಗಿನ ಠೇವಣಿಗೆ ಮಾತ್ರ ವಿಮಾ ಸುರಕ್ಷತೆ ಇರುತ್ತದೆ. ಠೇವಣಿ ಮೇಲಿನ ವಿಮೆಯು 2020ರಲ್ಲಿ ಒಂದು ಲಕ್ಷ ರೂ. ಇತ್ತು. ಇದನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಈಗ 10 ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.