ದಿವಂಗತ ಪುನೀತ್ ರಾಜಕುಮಾರ್ (Puneeth Rajkumar) 50ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಂದು ‘ಅಪ್ಪು’ (Appu)ಚಿತ್ರ ರೀ-ರಿಲೀಸ್ ಆಗಿದೆ. ಹೀಗಾಗಿ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಚಿತ್ರ ಮಂದಿರಕ್ಕೆ ತೆರಳಿ ಚಿತ್ರ ವೀಕ್ಷಿಸಿದೆ. ಈ ವೇಳೆ ಅಣ್ಣ ರಾಘಣ್ಣ ಭಾವುಕರಾಗಿದ್ದಾರೆ.
ಚಿತ್ರ ನೋಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅಭಿಮಾನಿಗಳ ಜಾತ್ರೆ. ಈ ಜಾತ್ರೆ ನೋಡಿದರೆ ಒಂದು ಕಡೆ ನೋವಾಗುತ್ತದೆ. ಇನ್ನೊಂದು ಕಡೆ ಖುಷಿಯಾಗುತ್ತದೆ. ‘ಅಪ್ಪು’ ಸಿನಿಮಾ ರಿಲೀಸ್ ಆದ ಆ ದಿನಕ್ಕೆ ನಾವು ಹೋಗಬಾರದು. ಅಪ್ಪಾಜಿ, ಅಮ್ಮ, ಅಪ್ಪು ಇದ್ದರು. ಆ ದಿನಗಳು ನೆನಪಾಗುತ್ತದೆ. 23 ವರ್ಷ ಆದರೂ ‘ಅಪ್ಪು’ ಸಿನಿಮಾದ ಡೈಲಾಗ್, ಲಿರಿಕ್ಸ್ ನ್ನು ಅಭಿಮಾನಿಗಳು ಮರೆತಿಲ್ಲ. ಎಲ್ಲರೂ ಅಪ್ಪುನ ಸಂಭ್ರಮಿಸಿದರು. ಇದನ್ನು ನೋಡಿದರೆ ಅಪ್ಪು ಮರಳಿ ಬರ್ತಾನೇನೋ ಅನಿಸ್ತಿದೆ ಎಂದು ಭಾವುಕರಾಗಿ ಹೇಳಿದ್ದಾರೆ.