ಬೆಂಗಳೂರು: ಒಂದು ದೇಶ ಒಂದೇ ಚುನಾವಣೆಯಿಂದ ಪ್ರಾದೇಶಿಕ ಪಕ್ಷವು ರಾಷ್ಟ್ರಹಿತದೊಂದಿಗೆ ಹಾಗೂ ರಾಷ್ಟ್ರೀಯ ಪಕ್ಷವು ಪ್ರಾದೇಶಿಕ ಹಿತೈಷಿಯಾಗಿ ಚಿಂತಿಸುವಂತೆ ಆಗಲಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಭಿಪ್ರಾಯಪಟ್ಟರು.
ಜಯನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ನಡೆದ ‘ಒಂದು ದೇಶ ಒಂದು ಚುನಾವಣೆ’ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸುವ ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕು ಎಂದು ಆಶಿಸಿದರು.
ಯುವಜನರು ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಮತದಾನದಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳಬೇಕಿದೆ. ಎಲ್ಲರೂ ಸಮಾನರು, ಪುರುಷ- ಮಹಿಳೆ ಸೇರಿ ಎಲ್ಲರಿಗೂ ಒಂದು ಮತದಾನದ ಹಕ್ಕಿದೆ ಎಂಬುವುದನ್ನು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲೇ ಜಾರಿಗೊಳಿಸಿದ ದೇಶ ನಮ್ಮದು ಎಂದು ವಿವರಿಸಿದದರು.
1951ರಲ್ಲಿ ಮೊದಲ ಚುನಾವಣೆ ನಡೆದಿತ್ತು. 7 ಹಂತಗಳಲ್ಲಿ ಅದು ನಡೆಯಿತು. 57ರಲ್ಲಿ 2ನೇ ಚುನಾವಣೆ ನಡೆಸಲಾಯಿತು. 1952, 57, 62, 67ರಲ್ಲಿ ರಾಜ್ಯ ವಿಧಾನಸಭೆಗಳು- ಸಂಸತ್ತಿಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು ಎಂದು ನೆನಪಿಸಿದರು. 1970ರಲ್ಲಿ ಲೋಕಸಭೆಯನ್ನು ಒಂದು ವರ್ಷ ಮೊದಲೇ ವಿಸರ್ಜಿಸಲಾಯಿತು. ಕಮ್ಯುನಿಸ್ಟ್ ಪಕ್ಷದ ಆಡಳಿತ ಇದ್ದ ಕೇರಳ ರಾಜ್ಯದ ಆಡಳಿತದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಸಂವಿಧಾನಕ್ಕೆ ವಿರುದ್ಧವಾಗಿ ಆ ರಾಜ್ಯ ಸರಕಾರವನ್ನು ವಜಾ ಮಾಡಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸೇತರ ರಾಜ್ಯಗಳ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರು. ಹಿಂದೆ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಜನತಾ ಪಕ್ಷವೂ ಇದೇ ರೀತಿ ಮಾಡಿತ್ತು ಎಂದರು.
28 ರಾಜ್ಯಗಳು ಇರುವ ಭಾರತದಲ್ಲಿ ಚುನಾವಣೆ ಎಂಬುದು ಈಗ ನಿರಂತರ ಪ್ರಕ್ರಿಯೆ ಆಗಿದೆ. 45 ದಿನಗಳ ನೀತಿಸಂಹಿತೆ ಪ್ರಕ್ರಿಯೆ ಅಭಿವೃದ್ಧಿ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. 6 ತಿಂಗಳ ಕಾಲ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ನಡೆಯುತ್ತದೆ. ಒಂದು ಚುನಾವಣೆ ಸಂಬಂಧ ಒಂದು ರಾಜ್ಯ ಕನಿಷ್ಠ ಏಳೂವರೆ ತಿಂಗಳನ್ನು ಕಳಕೊಳ್ಳುತ್ತದೆ ಎಂದು ವಿವರಿಸಿದರು.
ಶಿಕ್ಷಕರು, ಸಿಆರ್ ಪಿಎಫ್ ಸೇರಿ ಆಡಳಿತ ಯಂತ್ರವು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಒಂದೇ ಮತದಾರರ ಪಟ್ಟಿ ಇದ್ದು, ಸಂಸದ, ಶಾಸಕರ ಆಯ್ಕೆಗೆ ತಲಾ ಒಂದೊಂದು ಬಟನ್ ಒತ್ತುವ ಪ್ರಕ್ರಿಯೆಯೇ ಒಂದು ದೇಶ ಒಂದು ಮತದಾನದ ಹಿಂದಿದೆ. ನೀತಿ ಆಯೋಗ, ಕಾನೂನು ಆಯೋಗವೂ ಒಂದೇ ಚುನಾವಣೆಯ ಪರವಾಗಿದೆ; ಇದಕ್ಕೆ ಈಗ ಸಕಾಲ ಎಂದೇ ತಿಳಿಸಿದೆ ಎಂದು ಹೇಳಿದರು.
2019ರಲ್ಲಿ 16 ಪಕ್ಷಗಳು ಒಂದೇ ಚುನಾವಣೆಯನ್ನು ಬೆಂಬಲಿಸಿದ್ದವು. ಸಿಪಿಎಂ ಸೇರಿ 3 ಪಕ್ಷಗಳು ಇದನ್ನು ವಿರೋಧಿಸಿದ್ದವು. 1932ರಿಂದಲೇ ಒಂದು ದೇಶ ಒಂದು ಚುನಾವಣೆಯ ವಿಚಾರ ಚರ್ಚೆಗೆ ಒಳಪಟ್ಟಿದೆ ಎಂದು ತಿಳಿಸಿದರು. ಈ ಪದ್ಧತಿಯಿಂದ ಮತದಾರರು ಉದಾಸೀನ ಪ್ರವೃತ್ತಿಯಿಂದ ಮತದಾನ ಮಾಡದೆ ಉಳಿಯುವುದನ್ನು ತಪ್ಪಿಸಲು ಸಾಧ್ಯ ಎಂದು ಆಶಿಸಿದರು. ಇದು ಯುವಜ£ರು ಮತದಾನದಲ್ಲಿ ಉತ್ಸಾಹದಿಂದ ಭಾಗವಹಿಸುವಿಕೆಗೆ ಪೂರಕ ಎಂದರು.
ಒಂದೇ ಚುನಾವಣೆಯಿಂದ ಉಳಿತಾಯದ ಮೂಲಕ ಜಿಡಿಪಿಗೆ 4.5 ಲಕ್ಷ ಕೋಟಿ ಕೊಡುಗೆ ಲಭಿಸಬಲ್ಲದು. ಸಂಸತ್ ಚುನಾವಣೆಗೆ ಅಭ್ಯರ್ಥಿಗಳು 1.74 ಲಕ್ಷ ಕೋಟಿ ಖರ್ಚು ಮಾಡಿದ್ದಾರೆ. ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಸಮಿತಿಯು ಒಂದೇ ಚುನಾವಣೆ ಸಂಬಂಧ ವರದಿ ಕೊಟ್ಟಿದೆ. ಅದನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಇದರ ಸಂಬಂಧ ಮಾಹಿತಿ ಕೊಡುತ್ತಿದೆ ಎಂದು ತಿಳಿಸಿದರು. ಚುನಾವಣೆಗೆ ಕಡಿಮೆ ಖರ್ಚು, ಅಭಿವೃದ್ಧಿಗೆ ಹೆಚ್ಚು ಹಣ ಸಿಗಲಿದೆ ಎಂದು ವಿವರಿಸಿದರು.
ಒಂದೇ ಚುನಾವಣೆ ಎಂಬುದು ಸಾರ್ವಜನಿಕ ಹಿತಾಸಕ್ತಿಯ ಕ್ರಮವೇ ಹೊರತು ಇದನ್ನು ಹೇರುತ್ತಿಲ್ಲ; ಇದೊಂದು ಪ್ರಜಾಸತ್ತಾತ್ಮಕ ಕ್ರಮ ಎಂದು ಅವರು ಸ್ಪಷ್ಟಪಡಿಸಿದರು. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2034ರಲ್ಲಿ ಒಂದೇ ಚುನಾವಣೆಯು ಜಾರಿ ಆಗಲಿದೆ ಎಂದು ಅವರು ನುಡಿದರು.
ಅತ್ಯಂತ ದೊಡ್ಡ ಪಕ್ಷವಾಗಿದ್ದರೂ, ಬಿಜೆಪಿ ಬಗ್ಗೆ ದೇಶಾದ್ಯಂತ ಜನರ ಒಲವಿದ್ದರೂ ಚುನಾವಣಾ ಕ್ಷೇತ್ರದಲ್ಲಿ ಸುಧಾರಣೆ ತರಲು ನಾವು ಮುಂದಾಗಿದ್ದೇವೆ. ದೇಶ ಮೊದಲು ಎಂಬ ಚಿಂತನೆಯೇ ಇದಕ್ಕೆ ಕಾರಣ ಎಂದು ಅವರು ಹೇಳಿದರು. 4.5 ಲಕ್ಷ ಕೋಟಿ ಹೆಚ್ಚುವರಿ ಜಿಡಿಪಿ, ಹೆಚ್ಚು ಯುವಜನರ ಭಾಗೀದಾರಿಕೆ, ಪ್ರಬುದ್ಧ- ಸುಸ್ಥಿರ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯೊಂದಿಗೆ ನಾವು ಒಂದೇ ಚುನಾವಣೆ ಕುರಿತು ಆಸಕ್ತಿ ತೋರಿದ್ದೇವೆ ಎಂದು ವಿಶ್ಲೇಷಿಸಿದರು.
ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ಒಂದು ದೇಶ ಒಂದು ಚುನಾವಣೆ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ನವೀನ್ ಶಿವಪ್ರಕಾಶ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಒಂದು ದೇಶ ಒಂದು ಚುನಾವಣೆ ಜಾಗೃತಿ ಸಮಿತಿ ರಾಜ್ಯ ಸಹ ಸಂಚಾಲಕÀ ಅಶ್ವತ್ಥನಾರಾಯಣ್, ಜೈನ್ ವಿಶ್ವವಿದ್ಯಾಲಯದ ಉಪಾಧ್ಯಕ್ಷ ರವೀಂದ್ರ ಭಂಡಾರಿ, ಜಂಟಿ ಕಾರ್ಯದರ್ಶಿ ಸಂತೋಷ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮತ್ತು ಜೈನ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಜಿತೇಂದ್ರ ಮಿಶ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೈನ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಜಿತೇಂದ್ರ ಮಿಶ್ರ ಅವರು ಸ್ವಾಗತಿಸಿದರು. ಪ್ರತಿಮಾ ಸುಭಾಷ್ ಅವರು ಕಾರ್ಯಕ್ರಮ ನಿರೂಪಿಸಿದರು. ಶಾಸಕ ಸಿ.ಕೆ.ರಾಮಮೂರ್ತಿ ಅವರು ಅತಿಥಿಗಳನ್ನು ಪರಿಚಯಿಸಿದರು. ಒಂದು ದೇಶ ಒಂದು ಚುನಾವಣೆ ಜಾಗೃತಿ ಸಮಿತಿ ರಾಜ್ಯ ಸಹ ಸಂಚಾಲಕÀ ಅಶ್ವತ್ಥನಾರಾಯಣ್ ಅವರು ಪ್ರಾಸ್ತಾವಿಕ ಮಾತನಾಡಿದರು. ಬಳಿಕ ಸಂವಾದದಲ್ಲಿ ಒಂದು ದೇಶ ಒಂದು ಚುನಾವಣೆ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ನವೀನ್ ಶಿವಪ್ರಕಾಶ್ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.