ಚೆನ್ನೈ: ತಮಿಳುನಾಡು(Tamil Nadu) ರಾಜ್ಯ ಬಜೆಟ್(Budget) ಲಾಂಛನದಲ್ಲಿ ಅಧಿಕೃತ ರೂಪಾಯಿ ಚಿಹ್ನೆಯ ಬದಲಿಗೆ ‘ರು’ (ತಮಿಳು ಭಾಷೆಯಲ್ಲಿ ರುಬಾಯಿ) ಎಂಬ ತಮಿಳು ಅಕ್ಷರವನ್ನು ಬಳಸಿರುವುದು ಕೋಲಾಹಲಕ್ಕೆ ಕಾರಣವಾದ ಬೆನ್ನಲ್ಲೇ ತನ್ನ ನಡೆಯನ್ನು ಡಿಎಂಕೆ ಸಮರ್ಥಿಸಿಕೊಂಡಿದೆ. ಜೊತೆಗೆ ಡಿಎಂಕೆ ಐಟಿ ವಿಭಾಗವು ಟೀಕಾಕಾರರಿಗೆ ತಿರುಗೇಟು ನೀಡಿದ್ದು, ಅವರಿಗೆಲ್ಲ ತಮಿಳು ಇತಿಹಾಸದ ಬಗ್ಗೆ ತಿಳಿದಿಲ್ಲ ಎಂದು ಹೇಳಿದೆ.
ರೂಪಾಯಿಯೆಂದು ತಮಿಳು ಲಿಪಿಯಲ್ಲಿ ಬರೆಯುತ್ತಿರುವುದು ಹೊಸತೇನೂ ಅಲ್ಲ ಎಂದು ಹೇಳಿರುವ ಡಿಎಂಕೆ ಪಕ್ಷದ ಐಟಿ ವಿಭಾಗವು, 1935ರ ತಮಿಳು ಪುಸ್ತಕದಲ್ಲಿ ರೂಪಾಯಿ ಎಂದು ಬರೆಯಲು ತಮಿಳು ಅಕ್ಷರವನ್ನು ಬಳಸಿರುವುದರ ಚಿತ್ರವನ್ನು ಹಂಚಿಕೊಂಡಿದೆ. “ಇತಿಹಾಸವು ಅಜ್ಞಾನಕ್ಕೆ ದುಃಸ್ವಪ್ನವಿದ್ದಂತೆ! ರೂಪಾಯಿ ಚಿಹ್ನೆಯ ಬದಲು ತಮಿಲು ಅಕ್ಷರವನ್ನು ಬಳಸಿದ್ದಕ್ಕೆ, ತಮಿಳುನಾಡಿನ ಮೇಲೆ ಸಂಘಿ ವ್ಯವಸ್ಥೆಯು ಮುಗಿಬೀಳುತ್ತಿದೆ. ಅಂದರೆ, ಶತಮಾನಗಳಿಂದಲೂ ಆಗುತ್ತಿರುವ ತಮಿಳು ಬಳಕೆ ತಪ್ಪೇ” ಎಂದು ಪ್ರಶ್ನಿಸಿದೆ.
“1935ರ ಪುಸ್ತಕವೊಂದರ ಪುರಾವೆ ಇಲ್ಲಿದೆ. ಆದರೆ ಟೀಕಾಕಾರರೆಲ್ಲ ಈಗ ಸ್ವಯಂ ಘೋಷಿತ ಭಾಷಾ ತಜ್ಞರಾಗಿದ್ದಾರೆ. ಹಾಗಾಗಿ ಏನೂ ಮಾಡಲು ಸಾಧ್ಯವಿಲ್ಲ” ಎಂದೂ ಡಿಎಂಕೆ ಐಟಿ ವಿಭಾಗವು ಪೋಸ್ಟ್‌ನಲ್ಲಿ ಲೇವಡಿ ಮಾಡಿದೆ.
2010ರಲ್ಲಿ ರೂಪಾಯಿ ಚಿಹ್ನೆಯನ್ನು ಅಧಿಕೃತವಾಗಿ ಅಳವಡಿಸಿಕೊಳ್ಳುವ ಮೊದಲೇ ತಮಿಳು ಅಕ್ಷರವನ್ನು ರೂಪಾಯಿಗಳಿಗೆ ಬಳಸಲಾಗುತ್ತಿತ್ತು ಎಂದು ತೋರಿಸುವ ನಿಟ್ಟಿನಲ್ಲಿ ಡಿಎಂಕೆ ಐಟಿ ಘಟಕ ಈ ಪೋಸ್ಟ್ ಹಂಚಿಕೊಂಡಿದೆ.
ಇದರ ಜೊತೆಗೆ, ತಮಿಳುನಾಡಿನ ನಾಗರಿಕರೊಬ್ಬರು 2022ರಲ್ಲಿ ಖರೀದಿಸಿದ್ದ ಬಸ್ ಟಿಕೆಟ್‌ಗಳ ಚಿತ್ರವನ್ನೂ ಅದು ಹಂಚಿಕೊಂಡಿದೆ. ಅದರಲ್ಲಿ ‘ರು’ ಎಂಬ ತಮಿಳು ಅಕ್ಷರವೂ ಇದೆ. “ಬಸ್ ಟಿಕೆಟ್‌ಗಳಲ್ಲೂ ನಾವು ರೂಪಾಯಿ ಚಿಹ್ನೆಯ ಬದಲು ತಮಿಳು ಅಕ್ಷರದ ‘ರು’ವನ್ನು ಬಳಸುತ್ತಿದ್ದೆವು” ಎಂದೂ ಹೇಳಿದೆ.

ಬಿಜೆಪಿಯಿಂದ ಆಕ್ರೋಶ
ತಮಿಳುನಾಡು ಸರ್ಕಾರವು ರೂಪಾಯಿ ಚಿಹ್ನೆಯನ್ನು ಕೈಬಿಟ್ಟಿದ್ದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಎಂಕೆ ಸರ್ಕಾರವು ಭಾಷೆಯಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. “ಎಂ.ಕೆ.ಸ್ಟಾಲಿನ್ ಅವರ ನಡೆಯುವ ಪ್ರಾದೇಶಿಕ ಹೆಮ್ಮೆಯ ನೆಪದಲ್ಲಿ ವಿಭಜನೆಯ ಭಾವನೆಯನ್ನು ಉತ್ತೇಜಿಸುತ್ತಿದೆ. ತಮಿಳುನಾಡು ಬಜೆಟ್ ನಿಂದ ರೂಪಾಯಿ ಚಿಹ್ನೆಯನ್ನು ತೆಗೆದುಹಾಕುವ ಮೂಲಕ ಡಿಎಂಕೆಯು ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸಿದೆ” ಎಂದು ಸಚಿವೆ ನಿರ್ಮಲಾ ಆರೋಪಿಸಿದ್ದಾರೆ.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯಿಸಿ, “ಒಬ್ಬ ತಮಿಳಿಗ ವಿನ್ಯಾಸಗೊಳಿಸಿದ, ಇಡೀ ಭಾರತವೇ ಒಪ್ಪಿಕೊಂಡು, ನಮ್ಮ ಕರೆನ್ಸಿಯಲ್ಲಿ ಅಳವಡಿಸಿಕೊಂಡಿರುವ ರೂಪಾಯಿ ಚಿಹ್ನೆಯನ್ನು ಡಿಎಂಕೆ ಸರ್ಕಾರವು ಕಿತ್ತು ಹಾಕಿದೆ. ರೂಪಾಯಿಯ ಅಧಿಕೃತ ಚಿಹ್ನೆಯನ್ನು ವಿನ್ಯಾಸಗೊಳಿಸಿದವರೂ ಡಿಎಂಕೆಯ ಮಾಜಿ ಶಾಸಕನ ಪುತ್ರ ಥಿರು ಉದಯ್ ಕುಮಾರ್. ಸ್ಟಾಲಿನ್ ಅವರೇ ನೀವೆಂಥಾ ಮೂರ್ಖರು” ಎಂದು ಟ್ವೀಟ್ ಮಾಡಿದ್ದಾರೆ.