ಮುಂಬೈ: ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ಮದ್ಯದ ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆದುಬಿಡುತ್ತಾರೆ. ಇದರಿಂದ ಇತರರಿಗೆ ಹಾನಿಯಾಗುತ್ತದೆ. ಇತ್ತೀಚೆಗೆ ಅಂತಹದೇ ಒಂದು ಆಘಾತಕಾರಿ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಮಹಿಳಾ ಕಂಪಾರ್ಟ್ಮೆಂಟ್ಗೆ ಕಿಡಿಗೇಡಿಗಳು ಖಾಲಿ ಮದ್ಯದ ಬಾಟಲಿಯನ್ನು ಎಸೆದಿದ್ದಾರೆ. ಈ ಘಟನೆ ರಾತ್ರಿ ವೇಳೆ ಟಿಟ್ವಾಲಾ ಸ್ಥಳೀಯ ರೈಲು ಮಸೀದಿ ನಿಲ್ದಾಣವನ್ನು ದಾಟಿ ಮುಂಬೈನ ಸ್ಯಾಂಡ್ಹರ್ಸ್ಟ್ ರಸ್ತೆಯ ಕಡೆಗೆ ಹೋಗುತ್ತಿದ್ದಾಗ ಸಂಭವಿಸಿದೆ.
ಈ ಘಟನೆಗೆ ಎಫ್ಪಿಜೆಯ ಮಹಿಳಾ ಪತ್ರಕರ್ತೆ ಸಾಕ್ಷಿಯಾಗಿದ್ದಾಳೆ. ಆಕೆ ಈ ಘಟನೆಯ ವಿಡಿಯೊವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆ ಮಾಡಿದ್ದಾಳೆ. ಇದು ಈಗ ವೈರಲ್ ಆಗಿದೆ.
ಕಿಡಿಗೇಡಿಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಾಟಲಿಯನ್ನು ಎಸೆದಿದ್ದಾರೆ ಎಂದು ಹೇಳಲಾಗಿದೆ. ಅವರು ಎಸೆದ ಬಾಟಲಿ ಮೊದಲು ಫ್ಯಾನ್ಗೆ ತಾಗಿ, ನಂತರ ಬಾಟಲಿಯ ಚೂರುಗಳು ಕಂಪಾರ್ಟ್ಮೆಂಟಿನಲ್ಲಿ ಚದುರಿಹೋದವು. ಅದರಲ್ಲಿ ಒಂದು ತುಂಡು 18 ವರ್ಷದ ಅಮೀನಾ ಖಾನ್ ಎಂಬ ಹುಡುಗಿಗೆ ತಗುಲಿದೆ. ಆದರೆ ಅದೃಷ್ಟವಶಾತ್ ಆಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಬಾಟಲಿಯನ್ನು ಎಸೆದ ರೈಲು ಸಿಎಸ್ಎಂಟಿ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.
29 ವರ್ಷದ ಮಹಿಳೆ ಪ್ರಣವಿ ಬಿಲ್ಲಾ ಎಂಬಾಕೆ ಮುರಿದ ಬಾಟಲಿಯನ್ನು ಎತ್ತಿಕೊಂಡು ರೈಲಿನಲ್ಲಿದ್ದ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ವರದಿ ಮಾಡಿದ್ದಾಳೆ. ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಭದ್ರತಾ ಕ್ರಮಗಳು ಮತ್ತು ಇಂತಹ ಅಜಾಗರೂಕ ನಡವಳಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಕರೆ ನೀಡಿದ್ದಾರೆ. ಇಂತಹ ಘಟನೆಗಳ ದೂರುಗಳಿಗೆ ಪೊಲೀಸರು ತಕ್ಷಣ ಪ್ರತಿಕ್ರಿಯಿಸಬೇಕು ಎಂದು ಕೇಳಿಕೊಂಡಿದ್ದಾರೆ. ಅದೃಷ್ಟವಶಾತ್, ಬಾಟಲಿ ಯಾವುದೇ ಮಹಿಳಾ ಪ್ರಯಾಣಿಕರಿಗೆ ನೇರವಾಗಿ ತಗುಲಲಿಲ್ಲ. ಇಲ್ಲದಿದ್ದರೆ ಇದು ಮಾರಣಾಂತಿಕವಾಗಿರಬಹುದಿತ್ತು ಎನ್ನಲಾಗಿದೆ.
ಈ ಘಟನೆಯ ಬಗ್ಗೆ ಮಾತನಾಡಿದ ಮತ್ತೊಬ್ಬರು , “ನಾನು ಮಹಿಳಾ ಕಂಪಾರ್ಟ್ಮೆಂಟ್ನಲ್ಲಿ ಕುಳಿತಿದ್ದಾಗ, ಎಲ್ಲಿಂದಲೋ ದೊಡ್ಡ ಮದ್ಯದ ಬಾಟಲಿಯನ್ನು ಒಳಗೆ ಎಸೆಯಲಾಯಿತು. ಹಠಾತ್ ಘಟನೆಯಿಂದ ಎಲ್ಲರಿಗೂ ಶಾಕ್ ಆಗಿತ್ತು. ಆದರೆ ಈ ಬಗ್ಗೆ ದೂರು ನೀಡಲು ಹೋದಾಗ ಅಲ್ಲಿದ್ದ ಇಬ್ಬರು ಮಹಿಳಾ ಕಾನ್ಸ್ಟೇಬಲ್ಗಳು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ” ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾಳೆ. ವರದಿ ಪ್ರಕಾರ, ಈ ಘಟನೆ ನಡೆದ ಸ್ವಲ್ಪ ಸಮಯದ ನಂತರ ಒಬ್ಬ ವ್ಯಕ್ತಿಯು ರೈಲು ಹತ್ತಿ ಬಾಟಲಿ ತಗುಲಿ ಗಾಯವಾದ ಹುಡುಗಿಯ ಬಳಿಗೆ ಬಂದು ವಿಚಾರಿಸಿದ್ದಾನಂತೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಇದೇ ಮೊದಲಲ್ಲ
ಇತ್ತೀಚೆಗೆ ಸಿಎಸ್ಎಂಟಿ-ಕಲ್ಯಾಣ್ ಫಾಸ್ಟ್ ಎಸಿ ಲೋಕಲ್ ರೈಲಿನಲ್ಲಿ ಮಹಿಳಾ ಕಂಪಾರ್ಟ್ಮೆಂಟ್ಗೆ ವ್ಯಕ್ತಿಯೊಬ್ಬ ನಗ್ನನಾಗಿ ನುಗ್ಗಿದ್ದು ಮಹಿಳಾ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದಾನೆ. ರೈಲು ಘಾಟ್ಕೋಪರ್ ನಿಲ್ದಾಣವನ್ನು ತಲುಪುತ್ತಿದ್ದಂತೆ ವ್ಯಕ್ತಿಯೊಬ್ಬ ಮಹಿಳಾ ಬೋಗಿಯ ಬಾಗಿಲ ಬಳಿ ನಗ್ನನಾಗಿ ನಿಂತಿದ್ದಾನಂತೆ. ಮಹಿಳಾ ಪ್ರಯಾಣಿಕರು ಭಯಭೀತರಾಗಿ ಸಹಾಯಕ್ಕಾಗಿ ಕೂಗಿದ್ದು, ಅವರ ಕೂಗನ್ನು ಪಕ್ಕದ ಬೋಗಿಯಲ್ಲಿದ್ದ ಟಿಸಿ ಗಮನಿಸಿ ತಕ್ಷಣ ಬಂದು ಮಹಿಳಾ ಕಂಪಾರ್ಟ್ಮೆಂಟ್ನಿಂದ ಆ ವ್ಯಕ್ತಿಯನ್ನು ಹೊರಗೆ ತಳ್ಳಿದ್ದಾರೆ.
ಇಂತಹ ಘಟನೆಗಳು ಮಹಿಳಾ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿಹಾಕಿವೆ. ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಇಂತಹ ಸನ್ನಿವೇಶಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.