ಹೈದರಾಬಾದ್: ಮುಖ್ಯಮಂತ್ರಿ ರೇವಂತ್ ರೆಡ್ಡಿ(Revanth Reddy) ನೇತೃತ್ವದ ತೆಲಂಗಾಣ(Telangana) ಕಾಂಗ್ರೆಸ್ ಸರ್ಕಾರವು ತಮಗೆ ಬರುತ್ತಿದ್ದ ಸರ್ಕಾರಿ ಜಾಹೀರಾತನ್ನು ಸ್ಥಗಿತಗೊಳಿಸಿದೆ ಎಂದು ಆರೋಪಿಸಿ ತೆಲಂಗಾಣದ ಉರ್ದು ದಿನಪತ್ರಿಕೆ(Urdu daily)ಯೊಂದು ಪ್ರತಿಭಟನಾರ್ಥವಾಗಿ ಖಾಲಿ ಸಂಪಾದಕೀಯವನ್ನು ಪ್ರಕಟಿಸಿದ ಘಟನೆ ನಡೆದಿದೆ. 70 ರ ದಶಕದಲ್ಲಿ ಇಂದಿರಾ ಗಾಂಧಿ ಸರ್ಕಾರ ಹೇರಿದ ತುರ್ತು ಪರಿಸ್ಥಿತಿಯನ್ನು ಇದು ನೆನಪಿಸುತ್ತದೆ ಎಂದಿರುವ “ದಿ ಮುನ್ಸಿಫ್ ಡೈಲಿ”(The Munsif Daily) ಎಂಬ ಪತ್ರಿಕೆಯು ಸರ್ಕಾರದ ನ್ಯೂನತೆಗಳ ಬಗ್ಗೆ ವರದಿ ಮಾಡಿದ್ದಕ್ಕಾಗಿ ನಮ್ಮನ್ನು ಜಾಹೀರಾತಿನಿಂದ ವಂಚಿಸಿ, ಶಿಕ್ಷಿಸಲಾಗುತ್ತಿದೆ ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರರೊಬ್ಬರು, ಸರ್ಕಾರವು ಪತ್ರಿಕಾ ಜಾಹೀರಾತುಗಳ ಮೇಲಿನ ವೆಚ್ಚವನ್ನು ತಗ್ಗಿಸಲಾರಂಭಿಸಿದೆ. ಆ ನಿಟ್ಟಿನಲ್ಲಿ ನಾವು ಕೆಲವು ಪತ್ರಿಕೆಗಳಿಗೆ ಜಾಹೀರಾತುಗಳನ್ನು ನಿಲ್ಲಿಸಿದ್ದೇವೆ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಡೆದ ಕೋಮು ಸಾಮರಸ್ಯ ಕೆಡಿಸುವಂಥ ಘಟನೆಗಳನ್ನೂ ಈ ಉರ್ದು ದಿನಪತ್ರಿಕೆ ಬಹಿರಂಗಪಡಿಸಿದೆ. ಪೊಲೀಸ್ ವೈಫಲ್ಯಗಳು ಮತ್ತು ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸಿದೆ. ಚಿಲ್ಕೂರಿನಲ್ಲಿ ಪಾಳುಬಿದ್ದ ಮಸೀದಿ ಧ್ವಂಸ, ಅಲ್ಪಸಂಖ್ಯಾತ ಶಾಲಾ ಬಾಲಕಿಯರ ಸಮವಸ್ತ್ರದಿಂದ ದುಪಟ್ಟಾವನ್ನು ತೆಗೆದುಹಾಕಿರುವುದು ಮತ್ತು ವಕ್ಫ್ ಆಸ್ತಿಗಳನ್ನು ರಕ್ಷಿಸುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆಯೂ ಅದು ವರದಿ ಮಾಡಿದೆ. ಇಮಾಮ್‌ಗಳು ಮತ್ತು ಮುಅಝ್ಝಿನ್‌ಗಳ ವೇತನ ವಿಳಂಬ, ವಿಚ್ಛೇದಿತ ಮಹಿಳೆಯರಿಗೆ ಸ್ಟೈಪಂಡ್ ನೀಡದಿರುವುದು ಮತ್ತು ತೆಲಂಗಾಣ ಸಂಪುಟದಲ್ಲಿ ಮುಸ್ಲಿಂ ಪ್ರತಿನಿಧಿಯನ್ನೇ ಸೇರಿಸದಿರುವುದು ಸೇರಿದಂತೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಮೇಲೆ ನಮ್ಮ ಪತ್ರಿಕೆ ಬೆಳಕು ಚೆಲ್ಲುತ್ತಾ ಬಂದಿದೆ ಎಂದು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಥೆರ್ ಮೊಯಿನ್ ಹೇಳಿದ್ದಾರೆ.
“ಕಾಂಗ್ರೆಸ್ ಆಡಳಿತದಲ್ಲಿ ತೆಲಂಗಾಣವು ಹಾಲು-ಜೇನಿನಂಥ ನೆಲವಾಗಿ ಪರಿವರ್ತನೆಗೊಂಡಿದೆ ಎಂದೇ ನಾವು ವರದಿ ಮಾಡಬೇಕೆಂದು ರೇವಂತ್ ಸರ್ಕಾರ ನಿರೀಕ್ಷಿಸಿದರೆ, ನಾವು ಅದನ್ನು ಖಂಡಿತಾ ಮಾಡುವುದಿಲ್ಲ. ಬದಲಾಗಿ, ನಾವು ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆ: ತೆಲಂಗಾಣದ ನೆಲ ಏಕೆ ಬರಡಾಗಿವೆ? ಬಡವರನ್ನು ಈಗಲೂ ಹಸಿವು ಏಕೆ ಅಂಚಿಗೆ ತಳ್ಳುತ್ತಿದೆ? ಅಸಹಾಯಕ ಹೆಣ್ಣುಮಕ್ಕಳ ಮೇಲೆ ಏಕೆ ದೌರ್ಜನ್ಯ ನಡೆಯುತ್ತಿದೆ?” ಎಂಬ ಪ್ರಶ್ನೆಗಳನ್ನು ಮುಂದುವರಿಸುತ್ತೇವೆ ಎಂದೂ ಮೊಯಿನ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, 2023ರ ಜೂನ್ ತಿಂಗಳಲ್ಲಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅಪಾಯವನ್ನು ಎದುರಿಸುತ್ತಿದೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಉರ್ದು ಪತ್ರಿಕೆ ವಾಗ್ದಾಳಿ ನಡೆಸಿದೆ. “ದೇಶದ ಬಹುತೇಕ ಉರ್ದು ಪತ್ರಿಕೆಗಳು ಮೋದಿ ಸರ್ಕಾರವನ್ನು ಟೀಕಿಸಿವೆ. ಆದರೆ, ಕೇಂದ್ರ ಸರ್ಕಾರವು ಒಂದೇ ಒಂದು ಪತ್ರಿಕೆಯ ಜಾಹೀರಾತನ್ನು ತಡೆಹಿಡಿದಿದ್ದಿಲ್ಲ. ಆದರೆ, ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರವು ಸತ್ಯ ಮಾತನಾಡಿದ್ದಕ್ಕಾಗಿ ಮುನ್ಸಿಫ್ ಅನ್ನು ಶಿಕ್ಷಿಸುತ್ತಿದೆ. ಇದ್ಯಾವ ನ್ಯಾಯ” ಎಂದು ಪ್ರಶ್ನಿಸಿದೆ.
“1975ರಲ್ಲಿ ಇಂದಿರಾ ಗಾಂಧಿಯವರು ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಿ ವಿಫಲರಾದರು. ಇಂದು, ಅವರ ಪಕ್ಷವು ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತಿದೆ. ಆದರೆ, ಒಂದಂತೂ ಸತ್ಯ- ಲೇಖನಿಯು ಖಡ್ಗಕ್ಕಿಂತಲೂ ಹರಿತವಾದದ್ದು. ಭಾರತದಲ್ಲಿ ಪತ್ರಿಕೋದ್ಯಮದ ಧ್ವನಿಯನ್ನು ಅಡಗಿಸಲು ಎಂದಿಗೂ ಸಾಧ್ಯವಿಲ್ಲ” ಎಂದೂ ಹೇಳಿದೆ.