ಚೆನ್ನೈ: ಕೇಂದ್ರ ಸರ್ಕಾರ ಮತ್ತು ತಮಿಳುನಾಡು(Tamil Nadu) ನಡುವಿನ ಭಾಷಾ ಸಮರ, ಕ್ಷೇತ್ರ ಪುನರ್ ವಿಂಗಡಣೆ ವಿವಾದವು ತಾರಕಕ್ಕೇರಿರುವಂತೆಯೇ ಉತ್ತರ ಭಾರತವನ್ನು ಟೀಕಿಸುವ ಭರದಲ್ಲಿ ತಮಿಳುನಾಡಿನ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉತ್ತರ ಭಾರತದಲ್ಲಿ ಅನೇಕ ಸಂಗಾತಿಗಳನ್ನು ಹೊಂದುವ ಸಂಸ್ಕೃತಿ ಇದೆ ಎಂದು ತಮಿಳುನಾಡು ಸಚಿವ ದುರೈ ಮುರುಗನ್(Durai Murugan) ಹೇಳಿದ್ದು, ತಮಿಳನ್ನು ಅವಮಾನಿಸುವವರ ನಾಲಿಗೆಯನ್ನು ಕತ್ತರಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಉತ್ತರ ಭಾರತದ ಸಂಪ್ರದಾಯಗಳು ತಮಿಳು ಸಂಪ್ರದಾಯಗಳಿಗಿಂತ ಭಿನ್ನವಾಗಿದ್ದು, ಅಲ್ಲಿನ ಸಂಸ್ಕೃತಿಯು ಬಹುಪತ್ನಿತ್ವವನ್ನು ಅನುಮೋದಿಸುತ್ತವೆ ಎಂದು ಹೇಳಿದ್ದಾರೆ.
“ನಮ್ಮ ಸಂಸ್ಕೃತಿಯಲ್ಲಿ, ಒಬ್ಬ ಪುರುಷನು ಒಬ್ಬ ಮಹಿಳೆಯನ್ನು ಮಾತ್ರ ಮದುವೆಯಾಗುತ್ತಾನೆ. ಆದರೆ ಉತ್ತರ ಭಾರತದಲ್ಲಿ ಒಬ್ಬ ಮಹಿಳೆ ಹಲವು ಗಂಡಂದಿರನ್ನು ಹೊಂದಬಹುದು. ಕೆಲವೊಮ್ಮೆ 5 ಅಥವಾ 10 ಗಂಡಂದಿರನ್ನೂ ಹೊಂದಬಹುದು. ಅದೇ ರೀತಿ, 5 ಪುರುಷರು ಒಬ್ಬ ಮಹಿಳೆಯನ್ನು ಮದುವೆಯಾಗಬಹುದು. ಇದು ಅವರ ಸಂಪ್ರದಾಯ. ಒಬ್ಬರು ಹೊರಟುಹೋದರೆ, ಇನ್ನೊಬ್ಬರು ಅವರ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ” ಎಂದು ಮುರುಗನ್ ಮಹಾಭಾರತದ ದ್ರೌಪದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
“ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಜನಸಂಖ್ಯೆಯನ್ನು ನಿಯಂತ್ರಿಸುವಂತೆ ಎಲ್ಲ ರಾಜ್ಯಗಳಿಗೂ ಒತ್ತಾಯಿಸಿದ್ದವು. ಅದರಂತೆ ನಾವು ಅವರ ನಿರ್ದೇಶನಗಳನ್ನು ಅನುಸರಿಸಿ, ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದಾಗ್ಯೂ, ಉತ್ತರ ಭಾರತದಲ್ಲಿ, ಜನಸಂಖ್ಯೆ ಕಡಿಮೆಯಾಗಿಲ್ಲ. ಅಲ್ಲಿನ ಕುಟುಂಬಗಳು ಈಗಲೂ 17, 18 ಅಥವಾ 19 ಮಕ್ಕಳನ್ನು ಹೊಂದುವುದನ್ನು ಮುಂದುವರಿಸಿವೆ. ಅವರಿಗೆ ಬೇರೆ ಯಾವುದೇ ಜವಾಬ್ದಾರಿಗಳಿಲ್ಲ” ಎಂದೂ ಅವರು ಹೇಳಿದ್ದಾರೆ. ಜೊತೆಗೆ, ಇತ್ತೀಚೆಗೆ ಸಂಸತ್ತಿನಲ್ಲಿ ಡಿಎಂಕೆ ಸಂಸದರ ವಿರುದ್ಧ ಮಾತನಾಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ದುರೈ ಮುರುಗನ್, “ಇಂಥ ಕೀಳುಮಟ್ಟದ ಸಂಸ್ಕೃತಿಯಿಂದ ಬಂದಿರುವ ನೀವು ನಮ್ಮನ್ನು “ಅನಾಗರಿಕರು” ಎಂದು ಕರೆಯುತ್ತಿದ್ದೀರಾ? ನಾವು ನಿಮ್ಮ ನಾಲಿಗೆಯನ್ನು ಕತ್ತರಿಸುತ್ತೇವೆ. ಎಚ್ಚರಿಕೆ” ಎಂದೂ ಹೇಳಿದ್ದಾರೆ.