ಭೋಪಾಲ್: ಗೆಳೆಯನ ಬರ್ತ್ ಡೇ ಇದೆ ಎಂದರೆ ಎಲ್ಲ ಗೆಳೆಯರೂ ಒಗ್ಗೂಡಿ ಕೇಕ್ ಕಟ್ ಮಾಡಿಸುತ್ತಾರೆ. ರಾತ್ರೋರಾತ್ರಿ ಮನೆಗೆ ತೆರಳಿ ಸರ್ ಪ್ರೈಸ್ ಕೊಡುತ್ತಾರೆ. ಪಾರ್ಟಿ ಆಯೋಜಿಸಿ ಮಜಾ ಮಾಡುತ್ತಾರೆ. ಆದರೆ, ಮಧ್ಯಪ್ರದೇಶದಲ್ಲೊಬ್ಬ ಭೂಪನು ಗೆಳೆಯನ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಲು 21 ಲಕ್ಷ ರೂಪಾಯಿ ಮೌಲ್ಯದ ಥಾರ್ ರಾಕ್ಸ್ (Thar Roxx) ಜೀಪ್ ಕಳ್ಳತನ ಮಾಡಿದ್ದಾನೆ. ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೌದು, ಭೋಪಾಲ್ ನ ತುಳಸಿರಾಮ್ ಎಂಬಾತನು ತನ್ನ ಗೆಳೆಯ ಶುಭಂ ಎಂಬಾತನ ಜನ್ಮದಿನವನ್ನು ಆಚರಿಸಲು ಜೀಪ್ ಕಳ್ಳತನ ಮಾಡಿದ್ದಾನೆ. ನಿಧನ ಹೊಂದಿದ ವ್ಯಕ್ತಿಯ ಮನೆಯ ಎದುರು ತುಂಬ ದಿನಗಳಿಂದ ಥಾರ್ ರಾಕ್ಸ್ ನಿಂತಿತ್ತು. ಇದನ್ನು ಗಮನಿಸಿದ್ದ ತುಳಸಿರಾಮ್, ಏಕಾಏಕಿ ಜೀಪ್ ಕದ್ದು, ಅದನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಮೃತ ವ್ಯಕ್ತಿಯ ಸಂಬಂಧಿಕರು ದೂರು ನೀಡಿದ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
“ಆರೋಪಿಯು ಜೀಫ್ ಚಲಾಯಿಸಿಕೊಂಡು ಹೋಗಿದ್ದಾನೆ. ಇದೇ ವೇಳೆ ಬೈಕ್ ಗೆ ಗುದ್ದಿದ ಕಾರಣ ಬಂಪರ್ ಗೆ ಹಾನಿಯಾಗಿದೆ. ಕಾರು ರಿಪೇರಿ ಮಾಡಿಸುವಾಗ ಆತನನ್ನು ಬಂಧಿಸಲಾಗಿದೆ. ಸುಮಾರು 35-40 ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಎರಡು ತಂಡಗಳನ್ನು ರಚಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನೀಗ ವಿಚಾರಣೆಯ ವೇಳೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ” ಎಂದು ಟಿಟಿ ನಗರ್ ಸ್ಟೇಷನ್ ಹೌಸ್ ಆಫೀಸರ್ ಸುಧೀರ್ ಅರಾಜರಿಯಾ ಮಾಹಿತಿ ನೀಡಿದ್ದಾರೆ.
ಮೋಮೋಸ್ ಶಾಪ್ ಒಂದರಲ್ಲಿ ತುಳಸೀರಾಮ್ ಕೆಲಸ ಮಾಡುತ್ತಿದ್ದ. ಎಸ್ ಬಿಐ ಮ್ಯಾನೇಜರ್ ಆಗಿದ್ದ ಸಚಿನ್ ಗೋಖಲೆ ಅವರು ನಿಧನರಾಗಿದ್ದು, ಅವರ ಅಪಾರ್ಟ್ ಮೆಂಟ್ ಬಳಿ ಥಾರ್ ಜೀಪ್ ನಿಲ್ಲಿಸಿದ್ದನ್ನು ನೋಡಿದ್ದಾನೆ. ಅಲ್ಲದೆ, ಎಸ್ ಬಿಐ ಗೆಸ್ಟ್ ಹೌಸ್ ನಲ್ಲಿ ಥಾರ್ ರಾಕ್ಸ್ ಕೀಗಳು ಇರುವುದು ಗೊತ್ತಾಗಿದೆ. ಗೆಸ್ಟ್ ಹೌಸ್ ನಲ್ಲಿ ತನ್ನ ಸಹೋದರ ಕೆಲಸ ಮಾಡುತ್ತಿದ್ದ ಕಾರಣ ಜೀಪ್ ಕೀ ಎಗರಿಸಲು ಸಹಾಯವಾಗಿದೆ ಎಂದು ತಿಳಿದುಬಂದಿದೆ.