ನವದೆಹಲಿ: ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿನ ಎರಡು ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಆಡದಂತೆ ನಿಷೇಧ ಹೇರಿದೆ. ಈ ನಿರ್ಣಯವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಬಿಸಿಸಿಐಯ ಹೊಸ ನಿಯಮಗಳ ಪ್ರಕಾರ, ಐಪಿಎಲ್ ಟೂರ್ನಿಯ ಕೊನೆಯ ಹಂತದಲ್ಲಿ ಪಂದ್ಯಾವಳಿಯಿಂದ ಹಿಂದೆ ಸರಿಯುವ ಆಟಗಾರರು ಎರಡು ವರ್ಷಗಳ ಕಾಲ ಹರಾಜಿನಲ್ಲಿ ಭಾಗವಹಿಸಲು ಅನರ್ಹರಾಗುತ್ತಾರೆ.
ಕಳೆದ ವರ್ಷದ ಮೆಗಾ ಹರಾಜಿನಲ್ಲಿ, ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 6.25 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಹ್ಯಾರಿ ಬ್ರೂಕ್ ಅವರು ಮುಂಬರುವ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗೆ ತಯಾರಿ ನಡೆಸುವ ಸಲುವಾಗಿ 2025ರ ಐಪಿಎಲ್ ಟೂರ್ನಿಯಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಹೇಳಿಕೆಯಲ್ಲಿ, “ಕಳೆದ ವರ್ಷ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೊದಲು ಪ್ರತಿಯೊಬ್ಬ ಆಟಗಾರನಿಗೆ ತಿಳಿಸಲಾದ ನಿಯಮಗಳ ಪ್ರಕಾರ, ಬಿಸಿಸಿಐ ಹ್ಯಾರಿ ಬ್ರೂಕ್ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸುವ ಬಗ್ಗೆ ಇಸಿಬಿ ಮತ್ತು ಆಟಗಾರನಿಗೆ ಅಧಿಕೃತ ಸಂವಹನ ಕಳುಹಿಸಲಾಗಿದೆ. ಇದು ಮಂಡಳಿಯು ನಿಗದಿಪಡಿಸಿದ ನೀತಿಯಾಗಿದೆ ಮತ್ತು ಪ್ರತಿಯೊಬ್ಬ ಆಟಗಾರನು ಅದಕ್ಕೆ ಬದ್ಧನಾಗಿರಬೇಕು,” ಎಂದು ತಿಳಿಸಿದ್ದಾರೆ.
ಐಪಿಎಲ್‌ನ ಹೊಸ ನಿಯಮಗಳ ಪ್ರಕಾರ, “ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಆಟಗಾರ, ಟೂರ್ನಿಯ ಆರಂಭಕ್ಕೂ ಮುನ್ನ ಆಡಲು ಅಲಭ್ಯರಾದರೆ, ಅಂತಹ ಆಟಗಾರನನ್ನು ಐಪಿಎಲ್ ಟೂರ್ನಿಯಿಂದ ಮುಂದಿನ ಎರಡು ಆವೃತ್ತಿಗಳಿಗೆ ನಿಷೇಧಿಸಲಾಗುತ್ತದೆ. ಈ ಎರಡು ವರ್ಷಗಳ ಕಾಲ ಆ ಆಟಗಾರ ಹರಾಜಿನಲ್ಲಿ ಭಾಗವಹಿಸುವಂತಿಲ್ಲ,” ಎಂದು ಬಿಸಿಸಿಐ ತಿಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಕ್ಷಮೆ ಕೇಳಿದ ಹ್ಯಾರಿ ಬ್ರೂಕ್
“ಮುಂಬರುವ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ,” ಎಂದು ಹ್ಯಾರಿ ಬ್ರೂಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನಾನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಅವರ ಬೆಂಬಲಿಗರಲ್ಲಿ ಸಂಪೂರ್ಣವಾಗಿ ಕ್ಷಮೆಯಾಚಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.
“ನನಗೆ ಕ್ರಿಕೆಟ್ ತುಂಬಾ ಇಷ್ಟ. ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ, ನನ್ನ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ ಮತ್ತು ಈ ಮಟ್ಟದಲ್ಲಿ ನಾನು ಪ್ರೀತಿಸುವ ಆಟವನ್ನು ಆಡಲು ಅವಕಾಶ ಸಿಕ್ಕಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ನಂಬುವ ಜನರ ಮಾರ್ಗದರ್ಶನದೊಂದಿಗೆ, ಈ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಲು ನಾನು ಸಮಯ ತೆಗೆದುಕೊಂಡಿದ್ದೇನೆ. ಇಂಗ್ಲೆಂಡ್ ಕ್ರಿಕೆಟ್‌ಗೆ ಇದು ನಿಜವಾಗಿಯೂ ಪ್ರಮುಖ ಸಮಯ ಮತ್ತು ಮುಂಬರುವ ಸರಣಿಗೆ ತಯಾರಿ ನಡೆಸಲು ನಾನು ಸಂಪೂರ್ಣವಾಗಿ ಬದ್ಧನಾಗಲು ಬಯಸುತ್ತೇನೆ. ಬಿಡುವಿಲ್ಲದ ವೇಳಾಪಟ್ಟಿ ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ನಾನು ಈ ಅವಧಿಯಲ್ಲಿ ತಯಾರಿ ನಡೆಸಲು ಬಯಸುತ್ತಿದ್ದೇ. ಈ ಕಾರಣದಿಂದಲೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ,” ಎಂದು ಹ್ಯಾರಿ ಬ್ರೂಕ್ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ನಿರ್ಣಯದಿಂದಾಗಿ, ಹ್ಯಾರಿ ಬ್ರೂಕ್ ಅವರು 2025 ಮತ್ತು 2026ರ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲು ಅನರ್ಹರಾಗಿದ್ದಾರೆ. ಇದು ಆಟಗಾರರು ಐಪಿಎಲ್ ಪಂದ್ಯಾವಳಿಯಲ್ಲಿ ತಮ್ಮ ಬದ್ಧತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಸಂದೇಶವನ್ನು ನೀಡುತ್ತದೆ.