ಮುಂಬೈ: ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿ ಭಾರಿ ಟೀಕೆಗಳಿಗೆ ಕಾರಣವಾಗಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರೀಗ ಉಚಿತ ಕೊಡುಗೆಗಳ ಕುರಿತು ಚರ್ಚಾಸ್ಪದ ಹೇಳಿಕೆ ನೀಡಿದ್ದಾರೆ. “ಉದ್ಯೋಗ ಸೃಷ್ಟಿಯಿಂದ ಬಡತನವನ್ನು ನಿರ್ಮೂಲನೆ ಆಗುತ್ತದೆಯೇ ಹೊರತು, ಉಚಿತ ಕೊಡುಗೆಗಳಿಂದ ಅಲ್ಲ” ಎಂದು ಹೇಳಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾರಾಯಣಮೂರ್ತಿ ಮಾತನಾಡಿದರು. “ಜಗತ್ತಿನ ಯಾವ ದೇಶವೂ ಉಚಿತ ಕೊಡುಗೆಗಳಿಂದ ಬಡತನ ನಿರ್ಮೂಲನೆ ಮಾಡಿಲ್ಲ. ಭಾರತದಲ್ಲಿಯೂ ಇದು ಸಾಧ್ಯವಿಲ್ಲ. ಹೊಸ ಹೊಸ ಉದ್ಯಮಿಗಳು ಇನ್ನೂ ಹೆಚ್ಚಿನ ಉದ್ಯೋಗ ಸೃಷ್ಟಿಸಬೇಕು. ಇದರಿಂದ ದೇಶದ ಬಡತನ ನಿರ್ಮೂಲನೆಯಾಗುತ್ತದೆ” ಎಂದು ಹೇಳಿದ್ದಾರೆ.
“ಜನರಿಗೆ ಉಚಿತ ಕೊಡುಗೆಗಳನ್ನು ನೀಡಿದಾಗ, ಅದರಿಂದ ಯಾವ ಉಪಯೋಗವಾಗುತ್ತಿದೆ ಎಂಬುದನ್ನು ಸಮೀಕ್ಷೆ ಮಾಡಿ ನೋಡಬೇಕು. ಉದಾಹರಣೆಗೆ, ಮನೆಯೊಂದಕ್ಕೆ ಮಾಸಿಕ 200 ಯೂನಿಟ್ಸ್ ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ. ಉಚಿತವಾಗಿ ವಿದ್ಯುತ್ ನೀಡಿದ ಬಳಿಕ ಆ ಮನೆಯ ಮಗು ಹೆಚ್ಚು ಓದುತ್ತಿದೆಯೇ? ಪೋಷಕರು ಮಗುವಿನ ಓದಿಗೆ ಒತ್ತು ನೀಡುತ್ತಿದ್ದಾರೆಯೇ ಎಂಬುದು ಕೂಡ ಪ್ರಮುಖ ಸಂಗತಿಯಾಗುತ್ತದೆ” ಎಂದು ತಿಳಿಸಿದ್ದಾರೆ.
“ದೇಶದಲ್ಲಿ ಇನ್ನೂ ಹೆಚ್ಚಿನ ಉದ್ಯಮಿಗಳು ಹೊಸ ಹೊಸ ಉದ್ಯಮಗಳನ್ನು ಸ್ಥಾಪಿಸಬೇಕು. ಆ ಮೂಲಕ ಜನರಿಗೆ ಉದ್ಯೋಗ ನೀಡಬೇಕು. ಇದರಿಂದ ಬಿಸಿಲಿಗೆ ಇಬ್ಬನಿ ಕರಗಿದಂತೆ, ಬಡತನವೂ ಮಾಯವಾಗುತ್ತದೆ” ಎಂದು ಹೇಳಿದ್ದಾರೆ. ನಾರಾಯಣಮೂರ್ತಿ ಅವರು ಉಚಿತ ಕೊಡುಗೆಗಳ ಬಗ್ಗೆ ನೀಡಿದ ಹೇಳಿಕೆ ಕುರಿತು ಈಗ ಭಾರಿ ಚರ್ಚೆಯಾಗುತ್ತದೆ.