ಚೆನ್ನೈ: ತ್ರಿಭಾಷಾ ಶಿಕ್ಷಣದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಮಧ್ಯೆ ನಡೆಯುತ್ತಿರುವ ಸಂಘರ್ಷವು (Rupee Symbol Row) ದಿನೇದಿನೆ ಜಾಸ್ತಿಯಾಗುತ್ತಿದೆ. ಇದಕ್ಕೆ ನಿದರ್ಶನ ಎಂ ಬಂತೆ, ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ಬಜೆಟ್ ಪ್ರತಿಯಲ್ಲಿಅಧಿಕೃತ ರೂಪಾಯಿ (₹) ಚಿಹ್ನೆಯ ಬದಲು ತಮಿಳಿನ “ரூ” (ರೂ.) ಎಂದು ಮುದ್ರಿಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಆದರೆ, ₹ ಲೋಗೊವನ್ನು ರಚಿಸಿದ್ದು ತಮಿಳುನಾಡಿನ ಡಿ. ಉದಯ್ ಕುಮಾರ್ ಅವರು ಎಂಬುದು ಗಮನಾರ್ಹ ಸಂಗತಿಯಾಗಿದೆ. ಅಷ್ಟೇ ಏಕೆ, ಇವರು ಡಿಎಂಕೆ ಮಾಜಿ ಶಾಸಕ ಎನ್.ಧರ್ಮಲಿಂಗಂ ಅವರ ಪುತ್ರ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ.
ಹೌದು, ತಮಿಳುನಾಡಿನ ಖ್ಯಾತ ಅಕಾಡೆಮಿಕ್ ಡಿಸೈನರ್ ಆಗಿರುವ ಡಿ. ಉದಯ್ ಕುಮಾರ್ ಅವರು ರೂಪಾಯಿ ಚಿಹ್ನೆಯನ್ನು ರಚಿಸಿದ್ದಾರೆ. ಈಗಿನ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿರುವ, ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ರೂಪಾಯಿ ಚಿಹ್ನೆಯನ್ನು ಅಧಿಕೃತ ಎಂದು ಘೋಷಿಸಿತ್ತು.
ದೇವನಾಗರಿಯ ರ (र) ಹಾಗೂ ರೋಮನ್ ಕ್ಯಾಪಿಟಲ್ ಆರ್ (R) ಎಂಬ ಪದಗಳನ್ನು ತೆಗೆದುಕೊಂಡು ಉದಯ್ ಕುಮಾರ್ ಅವರು ಲೋಗೊ ರಚಿಸಿದ್ದರು. ಯುಪಿಎ ಸರ್ಕಾರವು 2010ರ ಜುಲೈ 15ರಂದು ಲೋಗೊವನ್ನು ಅಂತಿಮಗೊಳಿಸಿತ್ತು.
ಉದಯ್ ಕುಮಾರ್ ಅವರೀಗ ಗುವಾಹಟಿ ಐಐಟಿಯ ಡಿಸೈನ್ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ರೂಪಾಯಿ ಸಿಂಬಲ್ ಕುರಿತು ವಿವಾದ ಉಂಟಾಗುತ್ತಲೇ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ವಿವಾದದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಕಳೆದ 15 ವರ್ಷಗಳಿಂದ ಭಾಷೆ ವಿಚಾರದಲ್ಲಿ ಯಾವುದೇ ರಾಜಕೀಯಕ್ಕೆ ಕಾರಣವಾಗಿರದ ಸಿಂಬಲ್ ಈಗ ರಾಜಕೀಯ ವಿಷಯಕ್ಕಾಗಿ ಭಾರಿ ಚರ್ಚೆಯಾಗುತ್ತಿದೆ. ಅಂದಹಾಗೆ, ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾಷೆ, ಸಿಂಬಲ್ ವಿಷಯದಲ್ಲಿ ರಾಜಕೀಯ ಮೇಲಾಟ ಜೋರಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.