ತಿರುವನಂತಪುರಂ: ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೇರಳದಲ್ಲಿ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿ ಅವರ ಕಾರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ. ತಿರುವನಂತಪುರಂ ಜಿಲ್ಲೆ ನೆಯ್ಯಟಿಂಕರ ಎಂಬ ಪ್ರದೇಶದಲ್ಲಿ ತುಷಾರ್ ಗಾಂಧಿ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿದ್ದಾರೆ. ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಆರ್ ಎಸ್ ಎಸ್ ಕುರಿತು ತುಷಾರ್ ಗಾಂಧಿ ಹೇಳಿಕೆ ನೀಡಿದ ಕಾರಣ ಪ್ರತಿಭಟನೆ ನಡೆಸಿದ್ದಾರೆ.
ತುಷಾರ್ ಗಾಂಧಿ ಹೇಳಿದ್ದೇನು?
ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತುಷಾರ್ ಗಾಂಧಿ ಅವರು ಮಾತನಾಡಿದ್ದರು. “ರಾಷ್ಟ್ರೀಯ ಸ್ವಯಂಸೇವಕ ಸಂಘವು ವಿಷ ಇದ್ದಂತೆ. ಆ ವಿಷವು ದೇಶಾದ್ಯಂತ ಹರಡುತ್ತಿದೆ. ಬಿಜೆಪಿಯನ್ನು ಬೇಕಾದರೂ ಸೋಲಿಸಬಹುದು. ಆದರೆ, ಆರ್ ಎಸ್ ಎಸ್ಅನ್ನು ಸೋಲಿಸಲು ಆಗುವುದಿಲ್ಲ. ಆ ವಿಷದ ಬಗ್ಗೆ ನಾವು ಎಚ್ಚರದಿಂದ ಇರಬೇಕು. ವಿಷವು ದೇಶಾದ್ಯಂತ ಹರಡುವುದನ್ನು ನಾವು ತಡೆಯಬೇಕು” ಎಂದು ಹೇಳಿದ್ದರು.
“ಆರ್ ಎಸ್ ಎಸ್ ಎಂಬ ವಿಷವು ದೇಶಾದ್ಯಂತ ಹರಡಿದರೆ, ದೇಶವೇ ಇರುವುದಿಲ್ಲ. ನಾವು ಬ್ರಿಟಿಷರಿಗಿಂತ ಅಪಾಯಕಾರಿಯಾಗಿರುವ ಶತ್ರುವನ್ನು ಎದುರಿಸುತ್ತಿದ್ದೇವೆ. ಬ್ರಿಟಿಷರಿಗೆ ಭಾರತವನ್ನು ಲೂಟಿ ಮಾಡುವುದಷ್ಟೇ ಉದ್ದೇಶವಿತ್ತು. ಆದರೆ, ಆರ್ ಎಸ್ ಎಸ್ ಎಂಬ ವಿಷವು ಅವರಿಗಿಂತ ಅಪಾಯಕಾರಿಯಾಗಿದೆ. ಇದರ ಬಗ್ಗೆ ನನಗೆ ಭಯ ಇದೆ. ಇದು ದೇಶಾದ್ಯಂತ ವಿಸ್ತರಣೆಯಾಗದಂತೆ ನಾವು ತಡೆಯಬೇಕಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಐವರ ವಿರುದ್ಧ ಕೇಸ್ ದಾಖಲು
ಹಾಗಾಗಿ, ತುಷಾರ್ ಗಾಂಧಿ ಅವರ ಕಾರನ್ನು ಅಡ್ಡಗಟ್ಟಿದ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರು, ತಮ್ಮ ಹೇಳಿಕೆ ಹಿಂಪಡೆಯುವಂತೆ ಒತ್ತಾಯಿಸಿದರು. ಇದಾದ ಬಳಿಕ ಬಿಜೆಪಿ ಹಾಗೂ ಆ ಆರ್ ಎಸ್ ಎಸ್ ನ ಐವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, “ನಾನು ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ” ಎಂದು ತುಷಾರ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಹಾಗೂ ಆರ್ ಎಸ್ ಎಸ್ ಪ್ರತಿಭಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.