ಗಾಯದಿಂದ ಚೇತರಿಸಿಕೊಂಡು ಸಂಪೂರ್ಣ ಫಿಟ್ ಆಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಐಪಿಎಲ್ 18ನೇ ಆವೃತ್ತಿಯಲ್ಲಿ ಆಡಲು ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ) ಅವರಿಗೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ. ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡದ ಆಟಗಾರನಾಗಿರುವ ಮಿಚೆಲ್ ಮಾರ್ಷ್ ಶೀಘ್ರದಲ್ಲೇ ತಂಡ ಸೇರುವ ನಿರೀಕ್ಷೆ ಇದೆ. ಐಪಿಎಲ್ 2025 ಪಂದ್ಯಾವಳಿ ಮಾರ್ಚ್ 22ರಿಂದ ಆರಂಭವಾಗಲಿದೆ.
ಬೆನ್ನಿನ ಕೆಳಭಾಗದ ಗಾಯದಿಂದ ಬಳಲುತ್ತಿದ್ದ ಮಾರ್ಷ್, ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದರು. ಆದರೆ, ಇತ್ತೀಚೆಗೆ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಐಪಿಎಲ್ ಆಡಲು ಸಿದ್ಧರಾಗಿದ್ದಾರೆ. ಆದರೂ, ಅವರು ಬೌಲಿಂಗ್ ಮಾಡದಂತೆ ಮತ್ತು ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಹೇರದಂತೆ ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಂತರ, ಮಾರ್ಷ್ ಜನವರಿ 7ರಂದು ನಡೆದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್)ನಲ್ಲಿ ಒಂದೇ ಒಂದು ಪಂದ್ಯ ಆಡಿದ್ದರು. ನಂತರ, ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಮಾನಸಿಕ ಮತ್ತು ದೈಹಿಕವಾಗಿ ಚೇತರಿಸಿಕೊಳ್ಳಲು ಕೊನೆಯ ಮೂರು ಪಂದ್ಯಗಳಿಂದ ದೂರವಿದ್ದರು. ಆದರೆ, ಅವರ ಬೆನ್ನು ನೋವು ಕಡಿಮೆಯಾಗದ ಕಾರಣ ಅವರು ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು.
ಐಪಿಎಲ್ 2025ರಲ್ಲಿ ಆಡಲು ಅನುಮತಿ ಪಡೆದಿರುವ ಮಾರ್ಷ್, ಬ್ಯಾಟಿಂಗ್ ಮೂಲಕ ತಮ್ಮ ಪ್ರಭಾವ ಬೀರಲು ಮುಂದಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮಾರ್ಷ್ ಅವರ ಉಪಸ್ಥಿತಿಯು ಎಲ್ಎಸ್ಜಿ ತಂಡದ ಅಭಿಯಾನಕ್ಕೆ ನಿರ್ಣಾಯಕವಾಗಬಹುದು. ಕಳೆದ ಮೆಗಾ ಹರಾಜಿನಲ್ಲಿ, ಮಾರ್ಷ್ ಅವರನ್ನು ಎಲ್ಎಸ್ಜಿ ತಂಡ 3.3 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಲಕ್ನೋ ತಂಡಕ್ಕೆ ರಿಷಭ್ ಪಂತ್ ನಾಯಕನಾಗಿದ್ದಾರೆ. ಮಾರ್ಚ್ 24ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ
ನಿಕೋಲಸ್ ಪೂರನ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಆಯುಷ್ ಬದೋನಿ, ರಿಷಭ್ ಪಂತ್, ಆವೇಶ್ ಖಾನ್, ಡೇವಿಡ್ ಮಿಲ್ಲರ್, ಮಿಚೆಲ್ ಮಾರ್ಷ್, ಐಡನ್ ಮಾರ್ಕ್ರಮ್, ಅಬ್ದುಲ್ ಸಮದ್, ಆರ್ಯನ್ ಜುಯಲ್, ಆಕಾಶ್ದೀಪ್, ಶಾಬಾಜ್ ಅಹ್ಮದ್, ಹಿಮ್ಮತ್ ಸಿಂಗ್, ಎಂ. ಸಿದ್ಧಾರ್ಥ್, ದಿಗ್ವೇಷ್ ಸಿಂಗ್, ಆಕಾಶ್ ಸಿಂಗ್, ಶಮರ್ ಜೋಸೆಫ್, ಪ್ರಿನ್ಸ್ ಯಾದವ್, ಯುವರಾಜ್ ಚೌಧರಿ, ರಾಜ್ಯವರ್ಧನ್ ಹಂಗರ್ಗೆಕರ್, ಅರ್ಷಿನ್ ಕುಲಕರ್ಣಿ, ಮ್ಯಾಥ್ಯೂ ಬ್ರಿಟ್ಜ್ಕೆ.