ಬೆಂಗಳೂರು: ಸಿಲಿಕಾನ್ ಸಿಟಿ ವ್ಯಾಪ್ತಿಯಲ್ಲಿ ಬಾಕಿ ಆಸ್ತಿ ಉಳಿಸಿಕೊಂಡ ಮಾಲೀಕರಿಗೆ ಬಿಬಿಎಂಪಿಯಿಂದ ಶಾಕ್ ಎದುರಾಗುತ್ತಿದೆ.
ಬಾಕಿ ಉಳಿಸಿಕೊಂಡ ಕಟ್ಟಡ ಮಾಲೀಕರು ಈ ತಿಂಗಳ ಅಂತ್ಯದೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿ ಮಾಡಬೇಕು. ಇಲ್ಲವಾದರೆ, ಡಬಲ್ ತೆರಿಗೆ ಹಾಕಲು ಪಾಲಿಕೆ ಮುಂದಾಗಿದೆ.
ಕಳೆದ ವರ್ಷ ಬಾಕಿ ಅಸ್ತಿ ತೆರಿಗೆ ಕಟ್ಟುವುದಕ್ಕೆಂದು ಬಿಬಿಎಂಪಿ ಓಟಿಎಸ್ ನೀಡಿತ್ತು. ಓಟಿಎಸ್ ಮೂಲಕ ಬಾಕಿ ತೆರಿಗೆ ಕಟ್ಟಿದವರಿಗೆ ದಂಡ ಹಾಗೂ ಬಡ್ಡಿ ಮನ್ನಾ ಮಾಡಿತ್ತು. ಆದರೂ ಕೆಲವರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈಗ ಅಂಥವರಿಗೆ ಶಾಕ್ ನೀಡಲು ಪಾಲಿಕೆ ಮುಂದಾಗಿದೆ.
ಮಾ. 31ರೊಳಗೆ ಬಾಕಿ ಆಸ್ತಿ ತೆರಿಗೆ ಕಟ್ಟಬೇಕು. ಇಲ್ಲವಾದರೆ ಡಬಲ್ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ. ಈ ಕುರಿತು ಬಿಬಿಎಂಪಿ 2020ರ ಆಕ್ಟ್ ನಲ್ಲಿ ಪಾಲಿಕೆ ಕಾಯ್ದೆ ತಂದಿದೆ. ಈ ಕಾಯ್ದೆಗೆ ರಾಜ್ಯ ಸರ್ಕಾರ ಅಧಿಕೃತ ಅದೇಶ ಹೊರಡಿಸಿದೆ.
ಉದಾಹರಣೆಗೆ, ನಿಮ್ಮ ಬಾಕಿ ಅಸ್ತಿ ತೆರಿಗೆ 1 ಸಾವಿರ ರೂ. ಇದ್ದರೆ, 1 ಸಾವಿರ ರೂ. ದಂಡ ಸಮೇತ 2 ಸಾವಿರ ಆಗುತ್ತದೆ. ಅಲ್ಲದೇ, ಜೊತೆಗೆ ಶೇ. 9ರಷ್ಟು ಬಡ್ಡಿ ಬೀಳುತ್ತದೆ. ಅಂದರೆ, 1 ಸಾವಿರ ರೂ. ಬಾಕಿ ಉಳಿಸಿಕೊಂಡವರು 2180 ರೂ. ಪಾವತಿ ಮಾಡಬೇಕು. ಖಾತ ಇಲ್ಲದ ಎಲ್ಲಾ ಕಟ್ಟಡಗಳಿಗೂ ಈ ತೆರಿಗೆ ಅನ್ವಯವಾಗಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 1.82 ಲಕ್ಷ ಕಟ್ಟಡ ಮಾಲೀಕರು ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿದ್ದಾರೆ. ಮಹಾದೇವಪುರ, ಪೂರ್ವ ವಲಯಗಳಲ್ಲಿ ಅತಿ ಹೆಚ್ಚು ಬಾಕಿ ಅಸ್ತಿ ತೆರಿಗೆ ಬರಬೇಕು ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.