ಬೆಂಗಳೂರು: ನೀರು ಹಿಡಿಯುವಾಗ ಕರೆಂಟ್ ಶಾಕ್ ನಿಂದಾಗಿ ಮಹಿಳೆ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹ್ಮದ್ ಜನರ ಮೇಲೆ ಗೂಬಿ ಕೂರಿಸುವ ಕೆಲಸ ಮಾಡಿದ್ದಾರೆ.
ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾರ್ಕೆಟ್ ರಸ್ತೆಯಲ್ಲಿನ ಆನಂದಪುರದಲ್ಲಿ ಮೋಟರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಮಹಿಳೆ ಸಾವನ್ನಪ್ಪಿದ್ದರು.
ಮಹಿಳೆ ಸಾವನ್ನಪ್ಪುತ್ತಿದ್ದಂತೆ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಚಿವ ಜಮೀರ್ ಅಹ್ಮದ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾತನಾಡಿದರು. ಈ ಭಾಗದಲ್ಲಿ ಮನೆ ಮನೆಗೆ ಮೋಟಾರು ಹಾಕಿಕೊಂಡಿದ್ದಾರೆ. ಅನಧಿಕೃತವಾಗಿ 3 ರಿಂದ 4 ಪ್ಲೋರ್ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಈ ಭಾಗದಲ್ಲಿ ಕಾವೇರಿ ನೀರು ಪೂರೈಸಬೇಕೆಂಬ ಉದ್ಧೇಶದಿಂದ 15 ದಿನಗಳ ಹಿಂದೆಯಷ್ಟೇ ಮನೆ ಮನೆಗೆ ಕಾವೇರಿ ನೀರು ನೀಡುವ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆದರೂ ಅನಧಿಕೃತವಾಗಿ ನೀರು ಪಡೆಯಲು ಯತ್ನಿಸಿದ್ದಾರೆ. ಅನಧಿಕೃತವಾಗಿ ಕರೆಂಟ್ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ದುರಂತಕ್ಕೆ ಜನರೇ ಕಾರಣ ಎಂಬಂತ ಮಾತುಗಳನ್ನು ಸಚಿವರು ಆಡಿದ್ದಕ್ಕೆ ಅಲ್ಲಿದ್ದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮಗೆ ಕುಡಿಯಲು ನೀರಿಲ್ಲ. ಹಾಗಾದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.