ಚಂಡೀಗಢ: ತಮಿಳಿನ ಪಾರ್ಕಿಂಗ್ ಸಿನಿಮಾ ನೋಡಿರಬಹುದು. ಬಾಡಿಗೆ ಮನೆಯಲ್ಲಿ ಕಾರು ಪಾರ್ಕಿಂಗ್ ಗೆ ಶುರುವಾದ ಜಗಳವು ಎರಡು ಕುಟುಂಬಗಳ ನೆಮ್ಮದಿ ಹಾಳು ಮಾಡುವ ಕತೆಯು ಗಮನ ಸೆಳೆದಿತ್ತು. ಆದರೆ, ಪಂಜಾಬಿನ ಚಂಡೀಗಢದಲ್ಲಿ ಪಾರ್ಕಿಂಗ್ ಸಿನಿಮಾದ ರೀತಿಯಲ್ಲೇ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಹೌದು, ಬಾಡಿಗೆ ಮನೆಯಲ್ಲಿ ಪಾರ್ಕಿಂಗ್ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, 39 ವರ್ಷದ ಯುವ ವಿಜ್ಞಾನಿಯ ಸಾವಿನಲ್ಲಿ ಜಗಳ ಕೊನೆಗೊಂಡಿದೆ.
ಮೊಹಾಲಿಯ ಸೆಕ್ಟರ್ 67ರಲ್ಲಿ ಬಾಡಿಗೆ ಮನೆಯೊಂದರಲ್ಲಿ ಕಳೆದ ಮಂಗಳವಾರ ರಾತ್ರಿ ವಿಜ್ಞಾನಿ ಡಾ.ಅಭಿಷೇಕ್ ಸ್ವಾರ್ನ್ ಕರ್ ಹಾಗೂ ಮಾಂಟಿ ಎಂಬುವರ ಮಧ್ಯೆ ಜಗಳವಾಗಿದೆ. ಮೊಹಾಲಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಆ್ಯಂಡ್ ರಿಸರ್ಚ್ (ಐಐಎಸ್ಇಆರ್) ಸಂಸ್ಥೆಯಲ್ಲಿ ವಿಜ್ಞಾನಿಯಾಗಿರುವ ಅಭಿಷೇಕ್ ಅವರನ್ನು ರಸ್ತೆಗೆ ಎಳೆದುಕೊಂಡು ಬಂದ ಮಾಂಟಿ ಎಂಬಾತನು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಭಿಷೇಕ್ ಅವರ ಸಂಶೋಧನಾ ವರದಿಗಳು ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿವೆ. ಯುವ ವಿಜ್ಞಾನಿಯಾಗಿದ್ದ ಅವರು ಇಷ್ಟು ದಿನ ಸ್ವಿಟ್ಜರ್ ಲ್ಯಾಂಡಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರು ಐಐಎಸ್ಇಆರ್. ಅಷ್ಟೇ ಅಲ್ಲ, ಅಭಿಷೇಕ್ ಅವರು ಕೆಲ ದಿನಗಳ ಹಿಂದಷ್ಟೇ ಕಿಡ್ನಿಯ ಕಸಿ ಮಾಡಿಸಿಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಷೇಕ್ ಮೇಲೆ ಹಲ್ಲೆ ನಡೆದ ಕಾರಣ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಾ.ಅಭಿಷೇಕ್ ಅವರು ಮನೆಯ ಎದುರು ಬೈಕ್ ಪಾರ್ಕ್ ಮಾಡಿದ್ದರು. ರಾತ್ರಿ ಮಾಂಟಿ ಹಾಗೂ ಅಕ್ಕಪಕ್ಕದ ಮನೆಯವರು ಮಾತನಾಡಿಕೊಂಡು ನಿಂತಿದ್ದರು. ಇದೇ ವೇಳೆ ಹೊರಗೆ ಬಂದ ಅಭಿಷೇಕ್, ಬೈಕ್ ತೆಗೆಯಲು ಮುಂದಾಗಿದ್ದಾರೆ. ಆಗ ಮಾಂಟಿ ಹಾಗೂ ಅಭಿಷೇಕ್ ಮಧ್ಯೆ ವಾಗ್ವಾದ ಶುರುವಾಗಿದೆ. ವಾಗ್ವಾದವು ಗಲಾಟೆಯಾಗಿ ಬದಲಾಗಿದ್ದು, ಅಭಿಷೇಕ್ ಮೇಲೆ ಮಾಂಟಿ ಹಲ್ಲೆ ಮಾಡಿದ್ದಾರೆ. ಈ ಜಗಳದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.