ಲಖನೌ: ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಹೋಳಿ ಹಬ್ಬದ ಆಚರಣೆಗೂ ಮೊದಲೇ ಮಸೀದಿಗಳಿಗೆ ಟಾರ್ಪಲ್ ಗಳಿಂದ ಮುಚ್ಚಲಾಗಿದೆ. ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಗಲಾಟೆಗಳು ಆಗಬಾರದು ಎಂಬ ಕಾರಣಕ್ಕಾಗಿ ಸಂಭಾಲ್ ಜಿಲ್ಲಾಡಳಿತವು ಮಸೀದಿಗಳಿಗೆ ಟಾರ್ಪಲ್ ಹೊದಿಕೆಗಳನ್ನು ಹೊದಿಸಲು ಕ್ರಮ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
“ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಂಭಾಲ್ ನಗರದಲ್ಲಿ ಮೆರವಣಿಗೆ ಸಾಗಲಿದೆ. ಹಾಗಾಗಿ, ಮೆರವಣಿಗೆ ಸಾಗುವ ಮಾರ್ಗದಲ್ಲಿರುವ 10 ಮಸೀದಿಗಳಿಗೆ ಟಾರ್ಪಲ್ ಹೊದಿಸಲಾಗುತ್ತಿದೆ. ನಗರದಲ್ಲಿ ಸುಮಾರು 350 ಸಿಸಿಟಿವಿಗಳನ್ನು ಅಳವಡಿಸಲಾಗುತ್ತದೆ. ಹಾಗೆಯೇ, ಮುಸ್ಲಿಮರಿಗೂ ಶುಕ್ರವಾರ (ಹೋಳಿ ಹಬ್ಬದ ದಿನವಾದ ಮಾರ್ಚ್ 14) ಪ್ರಾರ್ಥನೆಗೂ ವ್ಯವಸ್ಥೆ ಮಾಡಲಾಗಿದೆ” ಎಂದು ಸಂಭಾಲ್ ಎಎಸ್ ಪಿ ಶ್ರೀಶ್ ಚಂದ್ರ ಮಾಹಿತಿ ನೀಡಿದ್ದಾರೆ.
ಯಾವೆಲ್ಲ ಮಸೀದಿಗಳಿಗೆ ಟಾರ್ಪಲ್?
ಶಾಹಿ ಜಾಮಾ ಮಸೀದಿ, ಲದಾನಿಯಾ ವಾಲಿ ಮಸೀದಿ, ಥಾಣೆವಾಲಿ, ಏಕ್ ರಾತ್, ಖಜೂರ್ ವಾಲಿ, ಅನಾರ್ ವಾಲಿ, ಗೋಲ್ ದುಕಾನ್ ವಾಲಿ ಮಸೀದಿ ಸೇರಿ ಹಲವು ಮಸೀದಿಗಳಿಗೆ ಈಗಾಗಲೇ ಟಾರ್ಪಲ್ ಹೊದಿಸುವ ಪ್ರಕ್ರಿಯೆ ಆರಂಭವಾಗಿದೆ. ಅಗತ್ಯ ಬಿದ್ದರೆ, ಇನ್ನೂ ಹೆಚ್ಚಿನ ಮಸೀದಿಗಳಿಗೆ ಟಾರ್ಪಲ್ ಹೊದಿಸಲಾಗುತ್ತದೆ ಎಂದು ತಿಳಿದುಬಂದಿದೆ. ಹೋಳಿ ಹಾಗೂ ರಂಜಾನ್ ಮಾಸದ ಪ್ರಾರ್ಥನೆಯು ಮಾರ್ಚ್ 14ರಂದೇ ಇರುವುದರಿಂದ ಹೆಚ್ಚಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಸಂಭಾಲ್ ನಗರದ ಸುರಕ್ಷತೆ ಕುರಿತು ನಿಗಾ ವಹಿಸಿದ್ದಾರೆ. ಅಧಿಕಾರಿಗಳಿಂದ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದಾರೆ. ಕಳೆದ ವರ್ಷ ಸಂಭಾಲ್ ನಗರದಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಜಾಮಾ ಮಸೀದಿ ಸರ್ವೆಗೆ ಕೋರ್ಟ್ ಆದೇಶ ನೀಡಿದ ಬಳಿಕ ಉಂಟಾದ ಪ್ರತಿಭಟನೆಯು ಹಿಂಸೆಗೆ ತಿರುಗಿ, ಸುಮಾರು 5 ಜನ ಮೃತಪಟ್ಟಿದ್ದರು. ಹಾಗಾಗಿ, ಸಂಭಾಲ್ ನಲ್ಲಿ ಗಲಭೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.