ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ ಅಸಾಧ್ಯ ಎಂದು ಹೇಳಿದ್ದಾರೆ.
ಟೈಕೂನ್ ಮುಂಬಯಿ 2025 ಸಮಾವೇಶದಲ್ಲಿ ಮಾತನಾಡಿದ ಮೂರ್ತಿ, ಉಚಿತ ಕೊಡುಗೆ ಕೊಡುವುದರಿಂದ ದೇಶದಲ್ಲಿನ ಬಡತನ ನಿರ್ಮೂಲನೆ ಮಾಡಲು ಆಗುವುದಿಲ್ಲ. ಉದ್ಯೋಗ ಸೃಷ್ಟಿಯಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದ್ದಾರೆ.
ಅಲ್ಲದೇ, ಈ ರೀತಿಯಾಗಿ ಉಚಿತ ಕೊಡುಗೆಗಳನ್ನು ಕೊಟ್ಟಿರುವ ಯಾವ ದೇಶವೂ ಅಭಿವೃದ್ಧಿ ಹೊಂದಿಲ್ಲ ಹಾಗೂ ಬಡತನದಿಂದ ಮೇಲೆ ಬಂದಿಲ್ಲ. ಉಚಿತ ಕೊಡುಗೆ ನೀಡುವುದನ್ನು ಬಿಟ್ಟು, ಹೆಚ್ಚು ಉದ್ಯಮ ಆರಂಭಿಸಬೇಕು. ಆಗ ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ಬಡತನ ನಿರ್ಮೂಲನೆ ಸಾಧ್ಯ. ಅಲ್ಲದೇ, 200 ಯೂನಿಟ್ ಉಚಿತ ವಿದ್ಯುತ್ ಉದಾಹರಣೆ ನೀಡಿದ ಮೂರ್ತಿ, ಉಚಿತ ವಿದ್ಯುತ್‌ನಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಿದೆಯೇ ಅಥವಾ ಮಕ್ಕಳ ಮೇಲೆ ಪೋಷಕರ ಕಾಳಜಿ ಹೆಚ್ಚಿದೆಯೇ ಎಂಬುದನ್ನು ಅರಿಯಲು 6 ತಿಂಗಳಿಗೊಮ್ಮೆ ಸಮೀಕ್ಷೆ ನಡೆಸಬಹುದು ಎಂದು ಸಲಹೆ ಕೂಡ ನೀಡಿದ್ದಾರೆ.